ಬಂಟ್ವಾಳ: ನ್ಯಾಯಾಂಗ ಅಧಿಕಾರ ಮೊಟಕು ವಕೀಲರ ಖಂಡನೆ
ಬಂಟ್ವಾಳ: ಜನನ ಮತ್ತು ಮರಣ ನೋಂದಣಿ ನಿಯಮಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗದ ಅಧಿಕಾರ ಮೊಟಕುಗೊಳಿಸಿ, ಸಹಾಯಕ ಆಯುಕ್ತರಿಗೆ ನೀಡಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಜಿಲ್ಲಾ ಕಾನೂನು ವೇದಿಕೆ ಅಧ್ಯಕ್ಷ ಎಸ್.ಪಿ.ಚಂಗಪ್ಪ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಾರದ ಒಳಗೆ ಈ ಆದೇಶ ಹಿಂಪಡೆಯದೇ ಇದ್ದಲ್ಲಿ ಜಿಲ್ಲೆಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಡಿಸಿ ಮತ್ತು ಎಸಿ ಕೋರ್ಟ್ ಗಳಲ್ಲಿ ಸಾಕಷ್ಟು ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ. ಇದೀಗ ಜನನ-ಮರಣ ಪ್ರಮಾಣಪತ್ರ ನೀಡುವ ಅಧಿಕಾರ ಜನಸಾಮಾನ್ಯರಿಗೆ ಹೊರೆಯಾಗಲಿದೆ ಎಂದರು.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ಹೋರಾಟ ಶೀಘ್ರವೇ ಮತ್ತೆ ಪುನರಾರಂಭಿಸಲಾಗುವುದು ಎಂದರು.
ಸುದ್ದಿ ಗೋಷ್ಠಿಯಲ್ಲಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕುಮಾರ್ ವೈ., ಪ್ರಮುಖರಾದ ವೀರೇಂದ್ರ ಎಂ.ಸಿದ್ಧಕಟ್ಟೆ, ವೆಂಕಟ್ರಮಣ ಶೆಣೈ, ಬಂಟ್ವಾಳ ಘಟಕ ಅಧ್ಯಕ್ಷ ಸುರೇಶ್ ಪೂಜಾರಿ, ರಾಜೇಶ್ ಬೊಳ್ಳುಕಲ್ಲು, ಮಹಮ್ಮದ್ ಕಬೀರ್, ಮೋಹನ್ ಕಡೇಶಿವಾಲ್ಯ, ತುಳಸೀದಾಸ್, ಚಂದ್ರಶೇಖರ ಬೈರಿಕಟ್ಟೆ, ಶೋಭಾ , ಸುರೇಶ್ ಶೆಟ್ಟಿ ಮತ್ತಿತರರು ಇದ್ದರು.