ಕೈಕಂಬ : ಮಂಗಳೂರು ತಾಲೂಕಿನ ಬಿಕರ್ಣಕಟ್ಟೆಯಿಂದ ಕಾರ್ಕಳ ತಾಲೂಕಿನ ಸಾಣೂರುವರೆಗಿನ ರಾಷ್ಟ್ರೀಯ ಹೆದ್ದಾರಿ ೧೬೯ರಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಈಗಾಗಲೇ ಕುಡುಪು ಕಟ್ಟೆಯಿಂದ ಗುರುಪುರ ಹೊಸ ಸೇತುವೆ ಪಕ್ಕದ ಪರಾರಿಯವರೆಗೆ ಹಲವು ಕಟ್ಟಡ ರಚನೆ ನೆಲಸಮ ಮಾಡಲಾಗಿದೆ.

ಪರಿಹಾರ ನೀಡಲಾದ ಕಟ್ಟಡ ರಚನೆಗಳನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ(ಎನ್ಎಚ್ಎ) ನೋಟಿಸು ಜಾರಿಗೊಳಿಸಿ, ಪರಿಹಾರ ನೀಡಲಾದ ಹೆದ್ದಾರಿ ಬದಿಯ ಕಟ್ಟಡ ರಚನೆ ತೆರವು ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.

ಕುಡುಪು ಕಟ್ಟೆಯ ಬಳಿ ಗ್ಯಾರೇಜ್, ಮಂಗಳಜ್ಯೋತಿಯಿಂದ ವಾಮಂಜೂರಿನವರೆಗೆ ಒಂದು ಪಾಶ್ವದಲ್ಲಿ ಮನೆಗಳ ಕಂಪೌಂಡ್ಗಳು, ಗೂಡಂಗಡಿಗಳು, ದೊಡ್ಡ ಕಟ್ಟಡಗಳು, ವಾಮಂಜೂರು ಮತ್ತು ಪರಾರಿಯಲ್ಲಿ ಬಸ್ ತಂಗುದಾಣಗಳು, ಮನೆ ಮತ್ತು ಅಂಗಡಿಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಹೆದ್ದಾರಿಯ ಮತ್ತೊಂದು ಪಾರ್ಶ್ವದಲ್ಲಿ ಇನ್ನಷ್ಟೇ ಕಾರ್ಯಾಚರಣೆ ಆರಂಭಗೊಳ್ಳಬೇಕಿದೆ. ಪರಿಹಾರ ಪಡೆದ ಪ್ರದೇಶದಲ್ಲಿ ಮಾತ್ರ ನೆಲಸಮ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಇದುವರೆಗೆ ಯಾರಿಂದಲೂ ವಿಶೇಷವಾದ ವಿರೋಧಗಳು ಕಂಡು ಬಂದಿಲ್ಲ ಎಂದು ಹೆದ್ದಾರಿ ವಿಸ್ತರಣೆ ಕಾಮಗಾರಿ ಗುತ್ತಿಗೆ ಪಡೆದಿರುವ ದುಲೀಪ್ ಬಿಲ್ಡ್ಕಾನ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.


