ಜು.೨೪ರಂದು ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ
ಕೈಕಂಬ: ವಾಮಂಜೂರು ಪ್ರದೇಶ ಬೀಡಿ ಕೆಲಸಗಾರರ ಸಂಘದ ವಾರ್ಷಿಕ ಮಹಾಸಭೆ ಜು.೨೪ರಂದು ಭಾನುವಾರ ವಾಮಂಜೂರಿನ ಶ್ರೀ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಸಿಐಟಿಯು ಮುಖಂಡ ಯು. ಬಿ. ಲೋಕಯ್ಯ ಮಾತನಾಡಿ, ಬೀಡಿ ಚಳುವಳಿ ಈ ಜಿಲ್ಲೆಯ ಐತಿಹಾಸಿಕ ಚಳುವಳಿಯಾಗಿದೆ. ಜಿಲ್ಲೆಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಿದ ಇತಿಹಾಸವಿದೆ. ಇವರ ನ್ಯಾಯಸಮ್ಮತ ಹೋರಾಟದೊಂದಿಗೆ ಕೈಜೋಡಿಸಿರುವ ಎಡಪಂಥೀಯ ಸಂಘಟನೆಗಳು ಬೀಡಿ ಮಹಿಳೆಯರಿಗೆ ಪಿಎಫ್, ಇಎಸ್‌ಐ ಹಾಗೂ ನ್ಯಾಯಯುತ ಸಂಬಳ ದೊರಕಿಸಿಕೊಟ್ಟಿದೆ. ಈಗಿನ ಮೋದಿ ಸರ್ಕಾರ ಕಾರ್ಮಿಕರ ಸವಲತ್ತುಗಳನ್ನು ಮುಟ್ಟುಗೋಲು ಹಾಕುತ್ತಿದೆ. ಈ ಮೋಸದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಿದ್ದ ಕಾರ್ಮಿಕರು ಮತ, ಧರ್ಮದ ಗುಂಗಿನಲ್ಲಿದ್ದಾರೆ ಎಂದರು.
ಕಾರ್ಮಿಕ ಮುಖಂಡ ಕೆ. ಗಂಗಯ್ಯ ಅಮೀನ್ ಮಾತನಾಡಿ, ಆರೋಗ್ಯದ ಹೆಸರಿನಲ್ಲಿ ಬೀಡಿ ಉದ್ಯಮಕ್ಕೆ ಸರ್ಕಾರ ಅಡ್ಡಗಾಲಿಡುತ್ತಿದೆ. ದೇಶದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತೀರ್ಮಾನ ಜಾರಿಗೊಳಿಸುವುದಾರೆ ಮೊದಲು ಬೀಡಿ ಕಾರ್ಮಿಕರಿಗೆ ಬದಲಿ ವ್ಯವಸ್ಥೆ ಕಲ್ಪಿಸಲಿ ಎಂದರು.
ಸಿಐಟಿಯು ವಾಮಂಜೂರು ಪ್ರದೇಶದ ಮುಖಂಡರಾದ ಹೊನ್ನಯ್ಯ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಬೀಡಿ ಕೆಲಸಗಾರರ ಸಂಘದ ಮುಖಂಡರಾದ ಭವಾನಿ ದೇವಸಬೆಟ್ಟು, ಪುಷ್ಪಾ ಅಣೆಬಳಿ, ಇಬ್ರಾಹಿಂ ದೇವಸಬೆಟ್ಟು, ಕಾರ್ಮಿಕ ಮುಖಂಡ ಜಯಶೀಲ ತಾರಿಗುಡ್ಡೆ, ರೈತ ಮುಖಂಡ ಬಾಬು ಸಾಲ್ಯಾನ್, ದಿನೇಶ್ ಬೊಂಡಂತಿಲ ಮತ್ತಿತರರು ಉಪಸ್ಥಿತಿದ್ದರು.
ಕುಪ್ಪೆಪದವಿನಲ್ಲಿ ಸಭೆ :
ಕುಪ್ಪೆಪದವು ಪ್ರದೇಶ ಬೀಡಿ ಕೆಲಸಗಾರರ ಸಂಘ(ಸಿಐಟಿಯು) ಇದರ ೩೨ನೇ ವಾರ್ಷಿಕ ಮಹಾಸಭೆ ಕುಪ್ಪೆಪದವು ಪಂಚಾಯತ್ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಎನ್. ಎ. ಹಸನಬ್ಬ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಬೀಡಿ ಫೆಡರೇಶನ್ ಕಾರ್ಯದರ್ಶಿ ಜೆ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ದ.ಕ ಜಿಲ್ಲೆಯ ಬೀಡಿ ಕಾರ್ಮಿಕರು ಹಲವು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಂದಾಜು ೨ ಲಕ್ಷ ಬೀಡಿ ಕೆಲಸಗಾರರಿದ್ದು, ಈ ಉದ್ಯಮ ನಿಷೇಧ ಅಂಚಿನಲ್ಲಿದೆ. ಚುನಾಯಿತ ಪ್ರತಿನಿಧಿಗಳು ಬೀಡಿ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಬೀಡಿ ಸಂಘದ ಮುಖಂಡ ಸದಾಶಿವದಾಸ್, ಭವಾನಿ, ಬೇಬಿ ನಾಯ್ಕ್, ವೇದಾವತಿ ಇರುವೈಲು, ಹೇಮಲತಾ ಮುಚ್ಚೂರು, ವಾರಿಜಾ, ವಸಂತಿ ಮತ್ತಿತರರು ಪಾಲ್ಗೊಂಡಿದ್ದರು.