ಬಾಳ್ತಿಲ: ಕೃಷಿ ಚಟುವಟಿಕೆಗೆ ಅಡ್ಡಿ ಆರೋಪ ಸತ್ಯಕ್ಕೆ ದೂರ ಸ್ಪಷ್ಟನೆ
ಬಂಟ್ವಾಳ: ಬಾಳ್ತಿಲ ಗ್ರಾಮದ ಕೋರ್ಯ ಹೊಸಮನೆ ಎಂಬಲ್ಲಿ ನೀರು ಹರಿಯುವ ಕಾಲುವೆಗೆ ತಡೆಯೊಡ್ಡಿ ಕಳೆದ ಮೂರು ವರ್ಷಗಳಿಂದ ಭತ್ತದ ಕೃಷಿ ಚಟುವಟಿಕೆಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಬಾಳ್ತಿಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಸಂತ ಸಾಲಿಯಾನ್ ಸ್ಪಷ್ಟಪಡಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ತಹಶೀಲ್ದಾರ್ ಸಹಿತ ಪೊಲೀಸರು ಕೂಡಾ ಹಲವು ಬಾರಿ ಸ್ಥಳ ತನಿಖೆ ನಡೆಸಿದ್ದಾರೆ. ಆದರೆ ಇಲ್ಲಿನ ನಿವಾಸಿಗಳಾದ ಮುತ್ತಪ್ಪ ಪೂಜಾರಿ ಮತ್ತು ನೀಲಮ್ಮ ಎಂಬವರು ಪೂರ್ವ ದ್ವೇಷ ಮತ್ತು ನಮ್ಮ ಕುಟುಂಬದ ಜಮೀನು ಕಬಳಿಸುವ ದುರುದ್ದೇಶದಿಂದ ಇಂತಹ ವೃಥಾ ಆರೋಪ ಹೊರಿಸುತ್ತಿದ್ದಾರೆ. ಮೂಲತಃ ಮುತ್ತಪ್ಪ ಪೂಜಾರಿ ಇಲ್ಲಿಯವರೇ ಅಲ್ಲ. ಆದರೆ ನಕಲಿ ದಾಖಲೆ ಸೃಷ್ಟಿಸಿ ಇಲ್ಲಿನ ಜಮೀನು ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಮೀನಿಗೆ ಸಂಬAಧಪಟ್ಟ ವಸಂತ ಸಾಲಿಯಾನ್, ಯಾದವ, ರಾಜೇಶ್ ಅಂಚನ್, ಭಾಸ್ಕರ ದೇರಾಜೆ ಇದ್ದರು.