ಕಂಬಳದಡ್ಡ: ‘ಊರುದ ಗೌಜಿ’ ಕೆಸರಿನ ಕ್ರೀಡಾಕೂಟ ಗಮನ ಸೆಳೆದ ಕಂಬಳ ಕೋಣ, ಆಟಿ ಕಳೆಂಜ
ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಕಂಬಳದಡ್ಡ ಗದ್ದೆಯಲ್ಲಿ ಬದನಡಿ ಷಣ್ಮುಖ ಕಲಾ ತಂಡದ ವತಿಯಿಂದ ಜು.24ರಂದು ಭಾನುವಾರ ಏರ್ಪಡಿಸಿದ್ದ ‘ಊರುದ ಗೌಜಿ’ ಕೆಸರಿನ ಗದ್ದೆ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ ಚಾಲನೆ ನೀಡಿದರು. ವೈದ್ಯಾಧಿಕಾರಿ ಡಾ.ಮನೋನ್ಮಣಿ ಮತ್ತಿತರರು ಇದ್ದಾರೆ.
ತುಳುನಾಡಿನ ಜನತೆ ಆಟಿ ತಿಂಗಳು ಕಷ್ಟಕರ ಜೀವನ ನಡೆಸುತ್ತಿದ್ದ ಚಿತ್ರಣ ಮತ್ತು ಅಂದಿನ ಆರೋಗ್ಯದಾಯಕ ಆಹಾರ ಪದ್ಧತಿ ಬಳಕೆ ಬಗ್ಗೆ ಯುವ ಜನತೆಯ ಮುಂದಿಡಲು ಕೆಸರಿನ ಗದ್ದೆ ಕ್ರೀಡಾಕೂಟ ಮತ್ತಿತರ ಕಾರ್ಯಕ್ರಮ ಅಗತ್ಯವಿದೆ ಎಂದು ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಗಣೇಶ ಶೆಟ್ಟಿ ಆರಂಬೋಡಿ ಹೇಳಿದ್ದಾರೆ.
ಇಲ್ಲಿನ ರಾಯಿ ಸಮೀಪದ ಕಂಬಳದಡ್ಡ ಗದ್ದೆಯಲ್ಲಿ ಬದನಡಿ ಷಣ್ಮುಖ ಕಲಾ ತಂಡದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಊರುದ ಗೌಜಿ’ ಕೆಸರುಗದ್ದೆ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮನೋನ್ಮಣಿ, ಉದ್ಯಮಿ ಗಣೇಶ ಕಾಮಾಜೆ, ರೂಪಾ ರಾಜೇಶ ಶೆಟ್ಟಿ ಶೀತಾಲ, ಯೋಗೀಶ ಪೂಜಾರಿ ಕರ್ಪೆ, ವರ್ತಕರ ಸಹಕಾರಿ ಸಂಘದ ಶಾಖಾಧಿಕಾರಿ ಮೋಹನ ಜಿ.ಮೂಲ್ಯ ಶುಭ ಹಾರೈಸಿದರು. ಬದನಡಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಸದಸ್ಯ ಶರತ್ ಕುಮಾರ್ ಕೊಯಿಲ, ಮಾಜಿ ಸದಸ್ಯ ಮೋಹನ್ ಕೆ.ಶ್ರೀಯಾನ್, ಷಣ್ಮುಖ ಕಲಾ ತಂಡದ ಅಧ್ಯಕ್ಷ ಸಂದೇಶ ಮಡಿವಾಳ ಅಂತರ, ಮಹಿಳಾ ಘಟಕ ಅಧ್ಯಕ್ಷೆ ಸುಜಾತ ಕೈತ್ರೋಡಿ ಮತ್ತಿತರರು ಇದ್ದರು.
ಷಣ್ಮುಖ ಕಲಾ ತಂಡದ ಸಂಚಾಲಕ ಕೆ.ರವೀಂದ ಪೂಜಾರಿ ಸ್ವಾಗತಿಸಿ, ಕಾರ್ಯದರ್ಶಿ ಸುಕೇಶ ಚಿಂಗಲಚ್ಚಿಲ್ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟ, ಕಂಬಳ ಓಟದ ಕೋಣಗಳು, ಆಟಿ ಕಳೆಂಜ ವೇಷಧಾರಿ ಭಾಗವಹಿಸಿ ಗಮನ ಸೆಳೆದರು.