ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಇದ್ದಾರೆ.

ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಜು.೬ರಂದು ಸಂಜೆ ಭೂಕುಸಿತದಿಂದ ಮೂವರು ಕೇರಳದ ಕಾರ್ಮಿಕರು ಸಾವನ್ನಪ್ಪಿದ ದಿನದಂದು ರಕ್ಷಣಾ ಕಾರ್ಯದಲ್ಲಿ ವಿಳಂಬ ಮತ್ತು ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಒದಗಿಸುವಲ್ಲಿ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಬಿ.ಸಿ.ರೋಡು ಕಾಂಗ್ರೆಸ್ ಕಚೇರಿಯಲ್ಲಿ ಜು.12ರಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಆಕ್ಸಿಜನ್ ಸಹಿತ ಆಂಬುಲೆನ್ಸ್ ಮತ್ತು ವೈದ್ಯರ ತಂಡ ಅಲ್ಲಿರಬೇಕಿತ್ತು. ಆದರೆ ಗಾಯಾಳುಗಳನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿ ಕೇಳುವವರೇ ಇರಲಿಲ್ಲ. ಆ ಬಳಿಕ ಮಂಗಳೂರಿನಲ್ಲಿ ಎರಡು ಖಾಸಗಿ ಆಸ್ಪತ್ರೆಗಳಿಗೆ ಸುತ್ತಾಡಿ ಖರ್ಚು ಭರಿಸುವವರು ಇಲ್ಲದೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದಾಗ ಅವರು ಸಾವನ್ನಪ್ಪಿದ್ದಾರೆ. ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯ ಇದ್ದರೆ ಮಂಗಳೂರಿಗೆ ಸಾಗಿಸುವ ಅನಿವಾರ್ಯತೆ ಇತ್ತೇ…? ಎಂದು ಅವರು ಪ್ರಶ್ನಿಸಿದರು.

ಈ ನಡುವೆ ಮನೆ ಒಡತಿ ಬೆನಡಿಕ್ಟ್ ಕಾರ್ಲೊ ಮತ್ತು ಅವರ ತಂದೆ ಹೆನ್ರಿ ಕಾರ್ಲೊ ಅವರನ್ನು ಸ್ಥಳಾಂತರಗೊಳಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯರು ಮರುದಿನ ಭೂ ಕುಸಿತದಿಂದ ನಾಲ್ವರನ್ನು ರಕ್ಷಿಸಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದೆಡೆ ಗ್ರಾಮಕರಣಿಕ ಭೇಟಿ ನೀಡದೆಯೇ ಮನೆ ಮಾಲೀಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲು ಮುಂದಾಗಿರುವುದು ನಾಚಿಕೆಗೇಡು ಎಂದು ಟೀಕಿಸಿದರು.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಸರ್ಕಾರ ಪರಿಹಾರಧನ ಬಿಡುಗಡೆಗೆ ‘ ಕಂಜೂಸುತನ ‘ ತೋರಬಾರದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಅಬ್ಬಾಸ್ ಆಲಿ, ಜಯಂತಿ ಪೂಜಾರಿ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *