ಉಪ್ಪುಗುಡ್ಡೆ: ಕುಡಿಯುವ ನೀರಿನ ಟ್ಯಾಂಕ್ ಕುಸಿತದ ಭೀತಿ ಯೋಜನಾ ನಿರ್ದೇಶಕ ಭೇಟಿ, ಪರಿಶೀಲನೆ
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ಉಪ್ಪುಗುಡ್ಡೆ ಎಂಬಲ್ಲಿ ಜೆಸಿಬಿ ಮೂಲಕ ಅವೈಜ್ಞಾನಿಕವಾಗಿ ಮಣ್ಣು ಕೊರೆದ ಪರಿಣಾಮ ೫ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಕುಸಿತದ ಭೀತಿ ಎದುರಿಸುತ್ತಿದೆ.
ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಸಮೀಪದ ಉಪ್ಪುಗುಡ್ಡೆ ಎಂಬಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕೆಳಭಾಗದಲ್ಲಿ ಜೆಸಿಬಿ ಮೂಲಕ ಅವೈಜ್ಞಾನಿಕವಾಗಿ ಮಣ್ಣು ಕೊರೆದ ಪರಿಣಾಮ ೫ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಕುಸಿತದ ಭೀತಿ ಎದುರಿಸುತ್ತಿದೆ. ಈಗಾಗಲೇ ನಿರಂತರ ಮಳೆಯಿಂದ ಪ್ರತಿದಿನ ಟ್ಯಾಂಕಿನ ಒಂದು ಭಾಗ ಕುಸಿಯುತ್ತಲೇ ಇದೆ. ಈ ಕುಡಿಯುವ ನೀರಿನ ಟ್ಯಾಂಕ್ ಕೆಳಭಾಗದಲ್ಲಿ ಖಾಸಗಿ ವ್ಯಕ್ತಿಗಳು ಅವೈಜ್ಞಾನಿಕವಾಗಿ ಮಣ್ಣು ಅಗೆಯುತ್ತಿರುವ ಬಗ್ಗೆ ಪುರಸಭೆಗೆ ದೂರು ಸಲ್ಲಿಸಲಾಗಿತ್ತು ಎನ್ನುತ್ತಾರೆ ಸ್ಥಳೀಯರು.
ಯೋಜನಾ ನಿರ್ದೇಶಕ ಭೇಟಿ:
ಹೆದ್ದಾರಿ ಪ್ರಾಧಿಕಾರ ತಾಂತ್ರಿಕ ವಿಭಾಗ ಯೋಜನಾ ನಿರ್ದೇಶಕರು ಸಹಿತ ವಿವಿಧ ಅಧಿಕಾರಿಗಳು ಸೋಮವಾರ ಭೇಟಿ ನೀಡಿ ಸ್ಥಳ ಪರಿಸೀಲನೆ ನಡೆಸಿದರು. ಜಿಲ್ಲಾ ನಗರ ಕೋಶ ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ತೇಜೋಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮತ್ತಿತರರು ಇದ್ದರು.
ಇದಕ್ಕೆ ಸುಮಾರು ರೂ ೧ ಕೋಟಿ ವೆಚ್ಚದ ತಡೆಗೋಡೆ ನಿರ್ಮಿಸಿದರೆ ಮಾತ್ರ ಟ್ಯಾಂಕ್ ಉಳಿಯಲು ಸಾಧ್ಯ. ಇಲ್ಲದಿದ್ದಲ್ಲಿ ಟ್ಯಾಂಕ್ ಕುಸಿದು ಪುರಸಭೆಗೆ ಲಕ್ಷಾಂತರ ಮೊತ್ತದ ನಷ್ಟದ ಜೊತೆಗೆ ಇಲ್ಲಿನ ನೂರಾರು ಮನೆಗಳಿಗೆ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳ ತಂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.