ಜು.07ರಂದು ತುರ್ತು ಸಭೆ
ಬಂಟ್ವಾಳ: ತಾಲೂಕಿನಲ್ಲಿ ಪಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಾಸಕರ ಕಚೇರಿಯಲ್ಲಿ ಜು.07 ರಂದು ಗುರುವಾರ ತುರ್ತು ಸಭೆ ನಡೆಸಿದರು.
ಮಳೆಗಾಲದಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ಪರಿಹರಿಸಲು ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಯಿಂದ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.
ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ನಡೆದ ದುರಂತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಮುಂದಿನ ದಿನಗಳಲ್ಲಿ ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅವರು ತಹಶೀಲ್ದಾರ್ ಸ್ಮಿತಾರಾಮು ಅವರಿಗೆ ಸೂಚಿಸಿದರು.
ಮಳೆ ಹಾನಿಯಿಂದ ಜನರ ಜೀವಕ್ಕೆ ಅಪಾಯವಾಗುವ ರೀತಿಯ ಸನ್ನಿವೇಶಗಳು ಇದ್ದರೆ , ಅದಕ್ಕೆ ಪೂರ್ವಭಾವಿ ಯಾಗಿ ಅಂತಹ ಕುಟುಂಬಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಸ್ಮಿತಾರಾಮು ಅವರಿಂದ ನೆರೆಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ತಗ್ಗುಪ್ರದೇಶದಲ್ಲಿ ವಾಸಮಾಡುವ ಕುಟುಂಬಗಳ ಎಚ್ಚರಿಕೆ ವಹಿಸಿ, ಅವರ ಬಗ್ಗೆ ಹೆಚ್ಚಿನ ನಿಗಾವಹಿಸಿ , ನೆರೆ ಬಂದ ಸಂದರ್ಭದಲ್ಲಿ ಅವರಿಗೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
ರಸ್ತೆ ಬದಿಯಲ್ಲಿ ಮೆಸ್ಕಾಂ ವಿದ್ಯುತ್ ಕಂಬಗಳಿಗೆ ಹಾಗೂ ಇತರ ಸಾರ್ವಜನಿಕ ಸೊತ್ತುಗಳಿಗೆ ಹಾನಿಯಾಗುವ ಸ್ಥಳದಲ್ಲಿ ಮರಗಳು ಇದ್ದರೆ ಅಂತಹ ಮರಗಳ ತೆರವು ಕಾರ್ಯವನ್ನು ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಜೊತೆಯಾಗಿ ಮಾಡಬೇಕು ಎಂದು ತಿಳಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ಹಾಗೂ ಇತರ ಕಡೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವಂತೆಯೂ ಸೂಚಿಸಿದರು. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆ ಗಳಿಗೆ ಶೀಘ್ರವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ, ಪಿ.ಡಿ.ಒ.ಕಂದಾಯ ನಿರೀಕ್ಷಕ , ಗ್ರಾಮ ಕರಣೀಕ ಪೋಲೀಸ್ ಅಧಿಕಾರಿಗಳ ಸಭೆ ನಡೆಸುವ ಬಗ್ಗೆ ಸಭೆಯಲ್ಲಿ ತಿಳಿಸಿದರು.