ಗುರುಪುರ ಹೆದ್ದಾರಿ ಬದಿಯ ಗುಡ್ಡ ಕುಸಿತದಿಂದ ರಸ್ತೆಗೆ ತೀವ್ರ ಅಪಾಯ
ಕೈಕಂಬ: ಗುರುಪುರದಲ್ಲಿ ಹೆದ್ದಾರಿ ಬದಿಯ ಗುಡ್ಡ ಕುಸಿತದಿಂದ ರಸ್ತೆಗೆ ತೀವ್ರ ಅಪಾಯ ಕಾದಿದೆಯಾದರೂ, ಇಲಾಖೆಯ ಆದೇಶದ ಹೊರತಾಗಿ ನಿನ್ನೆಯಿಂದಲೇ ರಾಷ್ಟ್ರೀಯ ಹೆದ್ದಾರಿ ೧೬೯ರ ಗುರುಪುರ ಮಾರ್ಗವಾಗಿ ಘನ ವಾಹನಗಳು ಸಂಚರಿಸುತ್ತಿವೆ. ಪರಿಸ್ಥಿತಿ ಸ್ಥಳೀಯಲ್ಲಿ ಆತಂಕ ಹೆಚ್ಚಿಸಿದೆ.
ಶಾಸಕ ಡಾ. ಭರತ್ ಶೆಟ್ಟಿ ಎನ್‌ಎಚ್ ಮಂಗಳೂರು ವಿಭಾಗದ ಅಧಿಕಾರಿಗಳಿಗೆ ನೀಡಿದ ಸೂಚನೆಯಂತೆ ತಕ್ಷಣಕ್ಕೆ ಘನ ವಾಹನಗಳು ಅತ್ತ ಗುರುಪುರ ಕೈಕಂಬದಿಂದ ಬಜ್ಪೆ-ಮರವೂರಾಗಿ ಮಂಗಳೂರಿನತ್ತ ಸಂಚರಿಸಿವೆ. ಜಲ್ಲಿಕಲ್ಲು ಹಾಕಿ ತಾತ್ಕಾಲಿಕವಾಗಿ ಹೆದ್ದಾರಿ ವಿಸ್ತರಣೆ ಮಾಡಿದ ಒಂದೆರಡು ತಾಸಿನ ಬಳಿಕ ಘನ ವಾಹನಗಳು ಈ ಮಾರ್ಗವಾಗಿ ಸಂಚರಿಸಲಾರಂಭಿಸಿವೆ. ಮಳೆ ನಿಲ್ಲದ ಹೊರತು ಈ ಮಾರ್ಗವಾಗಿ ಘನ ವಾಹನ ಸಂಚಾರ ಅಪಾಯಕ್ಕೆ ಆಹ್ವಾನ ನೀಡಿದಂತಾಗಲಿದೆ ಎಂದು ಸ್ಥಳೀಯರು ಭಯ ವ್ಯಕ್ತಪಡಿಸಿದ್ದಾರೆ.
ಹೆದ್ದಾರಿ ಕುಸಿತ ಪ್ರದೇಶದಲ್ಲಿ ನೀರಿನ ಝುರಿಯೊಂದಿದ್ದು, ಮಣ್ಣು ಕುಸಿತಕ್ಕೆ ಪಕ್ಕದಲ್ಲಿದ್ದ ಹಲಸಿನ ಮರ ನೆಲ್ಕಕುರುಳಿದೆ. ಗುಡ್ಡದ ಮೇಲ್ಗಡೆಯಿಂದ ಇಳಿಜಾರು ಪ್ರದೇಶದಲ್ಲಿ ನೀರಿನ ಒರತೆ ಹೆಚ್ಚಾಗಿ, ಮಣ್ಣು ಕುಸಿತ ಆಗುತ್ತಿದೆ.
ಕುಸಿತ ಉಂಟಾಗಿರುವ ಅಣೆಬಳಿಯ ವನಭೋಜನದ ಹತ್ತಿರ ಹೆದ್ದಾರಿಯ ಉದ್ದಕ್ಕೆ ಅರ್ಧ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಇನ್ನೊಂದು ಬದಿಗೆ ಜಲ್ಲಿಕಲ್ಲು ಹಾಕಿ ರಸ್ತೆ ಅಗಲೀಕರಿಸಲಾಗಿದೆ. ತಿರುವಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿಯಂತ್ರಿಸಲು ಇಬ್ಬರು ಹೋಂ ಗಾರ್ಡ್ಗಳ ನಿಯುಕ್ತಿಗೊಳಿಸಲಾಗಿದೆ.