ರಾಜೇಶ್ ನಾಯ್ಕ್ ಅವರ ಕನಸಿನ ಯೋಜನೆಯಾದ ಗೋಶಾಲೆ ನಿರ್ಮಾಣಕ್ಕೆ ಪೂರ್ವ ತಯಾರಿ
ಕೈಕಂಬ : ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಗುಣಿ ನದಿಯ ಕಿನಾರೆಯಲ್ಲಿ ಸುಮಾರು 14 ಎಕರೆ ಜಮೀನಿನಲ್ಲಿ ಅಂದಾಜು 2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ರೀತಿಯ ಮಾದರಿ ಗೋಶಾಲೆ ನಿರ್ಮಾಣಕ್ಕೆ ಯೋಜನೆ ತಯಾರಿಸಲಾಗಿದ್ದು, ಈ ಕುರಿತು ವಿಶೇಷ ಸಭೆ ಪೊಳಲಿ ದೇವಸ್ಥಾನ ದ ಆಡಳಿತ ಮಂಡಳಿಯ ಕಚೇರಿಯಲ್ಲಿ ಜೂ.2ರಂದು ಶನಿವಾರ ಸಂಜೆ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಕನಸಿನ ಯೋಜನೆಯಾದ ಗೋಶಾಲೆ ನಿರ್ಮಾಣಕ್ಕೆ ಪೂರ್ವ ತಯಾರಿಗಳು ನಡೆಯುತ್ತಿದ್ದು, ಈ ಬಗ್ಗೆ ಅಂದಾಜು ಪಟ್ಟಿ ತಯಾರಿಸಲು ಸಭೆಯಲ್ಲಿ ತಿಳಿಸಿದ್ದಾರೆ. ಅಂದಾಜು ಪಟ್ಟಿ ತಯಾರಿಸಿದ ಬಳಿಕ ಸರಕಾರದ ಮಟ್ಟದಲ್ಲಿ ಮುಖ್ಯಮಂತ್ರಿ ಜೊತೆ ಮಾತನಾಡಿ ಅನುಮತಿ ಜೊತೆಗೆ ಶೀಘ್ರವಾಗಿ ಗೋಶಾಲೆ ನಿರ್ಮಾಣಕ್ಕೆ ಮುಂದಾಗುವುದಾಗಿ ಅವರು ತಿಳಿಸಿದರು.
ಪಲ್ಗುಣಿ ನದಿ ತೀರದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ 9.50 ಎಕ್ರೆ ಜಮೀನು ಹಾಗೂ 4.75 ಎಕ್ರೆ ಸರಕಾರಿ ಜಮೀನು ಅಂದಾಜು 14 ಎಕರೆ ವಿಶಾಲವಾದ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣದ ಕನಸು ಹೊಂದಲಾಗಿದೆ. ಗೋವುಗಳು ಸ್ವಚ್ಛಂದವಾಗಿ ಮೇಯಲು ಹಾಗೂ ನದಿಯಲ್ಲಿ ನೀರು ಕುಡಿದು ಹಾಯಾಗಿ ಇರಬೇಕು ಎಂಬುದು ಇವರ ಯೋಚನೆಯಾಗಿದೆ.
ಅತ್ಯಂತ ಉತ್ತಮ ರೀತಿಯ ಗೋಶಾಲೆ ನಿರ್ಮಾಣ ಮಾಡುವುದು, ಬೇಕಾದ ಎಲ್ಲಾ ಮೂಲಭೂತ ವಾದ ಸೌಕರ್ಯಗಳನ್ನು ಒದಗಿಸುವ ಯೋಜನೆ ತಯಾರಿಸಲಾಗಿದ್ದು , ಗೋಶಾಲೆಯ ಭದ್ರತೆಯ ಬಗ್ಗೆ ನಿಗಾ ಇಡಲಾಗುತ್ತದೆ. ಇಲ್ಲಿ ಆರಂಭಿಕ ಹಂತದಲ್ಲಿ ಜಮೀನಿನ ಸಮತಟ್ಟು ಗೊಳಿಸಿ ಶೆಡ್ ನಿರ್ಮಾಣ , ಜಾನುವಾರುಗಳಿಗೆ ಕೊಠಡಿ, ಜಾನುವಾರುಗಳ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡುವ ಕೊಠಡಿ, ಕೆಲಸಗಾರ ಮನೆ,ಜೊತೆಗೆ ಶೌಚಾಲಯ ನಿರ್ಮಾಣ, ಇಲ್ಲಿಗೆ ತೆರಳಲು ರಸ್ತೆ ನಿರ್ಮಾಣ ಕಾರ್ಯಗಳು ನಡೆಯಲಿವೆ, ಈ ಬಗ್ಗೆ ಎಲ್ಲಾ ಯೋಜನೆಗಳನ್ನು ತಯಾರು ಮಾಡಲಾಗಿದೆ. ಎಲ್ಲವೂ ಯೋಚನೆಯಂತೆ ನಡೆದರೆ ನದಿ ಕಿನಾರೆಯಲ್ಲಿ ಅತ್ಯಂತ ದೊಡ್ಡ ಗೋಶಾಲೆ ನಿರ್ಮಾಣವಾಗಲಿದೆ.
ಸಭೆಯಲ್ಲಿ ದೇವಸ್ಥಾನ ದ ಆಡಳಿತ ಮೋಕ್ತೇಸರ ಅಮ್ಮುಂಜೆ ಗುತ್ತು ಡಾ! ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಪ್ರಧಾನ ಅರ್ಚಕ ಪವಿತ್ರಪಾಣಿ ಮಾದವ ಭಟ್ , ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಉಪಸ್ಥಿತರಿದ್ದರು.