ಮನೆ ಗೋಡೆ ಮೇಲೆ ಮೂಡಿತಂತೆ ಯಲ್ಲಮ್ಮ ದೇವಿ ಮುಖ! ಉಧೋ ಉಧೋ ಎಂದು ಕೈಮುಗಿದ ಗ್ರಾಮಸ್ಥರು
ಯಾದಗಿರಿ: ಗಣೇಶನ ಮೂರ್ತಿ ಹಾಲು ಕುಡಿಯುವುದು, ಬೇವಿನ ಮರದಿಂದ ಹಾಲು ಬರುವುದು, ಹನುಮಂತನ ಮೂರ್ತಿ ಕಣ್ಣು ಬಿಡುವುದು, ಸಾಯಿಬಾಬಾ ಮೂರ್ತಿಯಿಂದ ವಿಭೂತಿ ಬರುವುದು, ದೇವಿ ಮೂರ್ತಿಯಿಂದ ಕಣ್ಣೀರು ಸುರಿಸುವುದು ಇತ್ಯಾದಿ ಸುದ್ದಿಗಳನ್ನು ನೀವು ಕೇಳೇ ಇರುತ್ತೀರಿ. ಇದು ಸತ್ಯವೋ, ಸುಳ್ಳೋ, ದೇವರ ಪವಾಡವೋ, ಮೂಢ ನಂಬಿಕೆಯೋ ಎನ್ನುವುದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಇದೀಗ ಯಾದಗಿರಿಯಲ್ಲೂ ಇಂತದ್ದೇ ಪವಾಡ ನಡೆದಿದೆಯಂತೆ.
ಯಲ್ಲಮ್ಮ ದೇವಿ ಮುಖವೊಂದು ಗ್ರಾಮದ ಮನೆಯೊಂದರ ಗೋಡೆ ಮೇಲೆ ಮೂಡಿದ್ಯಂತೆ. ಇದನ್ನು ನೋಡಿದ ಗ್ರಾಮಸ್ಥರೆಲ್ಲ ದೇವಿ ಪವಾಡ ಅಂತ ಹೇಳುತ್ತಿದ್ದಾರೆ. ಗ್ರಾಮಸ್ಥರು ಇದನ್ನು ನೋಡೋಕೆ ಅಂತ ತಂಡೋಪತಂಡವಾಗಿ ಬಂದು ಉಧೋ ಉಧೋ ಯಲ್ಲಮ್ಮ ಉಧೋ ಅಂತಿದ್ದಾರೆ. ಗ್ರಾಮದ ಮಹಿಳೆಯರು ಗೋಡೆಗೆ ಆರತಿ ಬೆಳಗಿ, ತಾಯಿ ಕಾಪಾಡವ್ವ ಅಂತ ಕೈ ಮುಗಿದಿದ್ದಾರೆ.
ಗೋಡೆ ಮೇಲೆ ಮೂಡಿತು ಯಲ್ಲಮ್ಮ ದೇವಿ ಮುಖ!
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಪವಾಡವೊಂದು ನಡೆದಿದ್ಯಂತೆ. ಇಲ್ಲಿನ ಶೇಖಮ್ಮ ಹೆಳವರ ಎಂಬುವರ ಮನೆಯ ಗೋಡೆ ಮೇಲೆ ಚಿಕ್ಕನಹಳ್ಳಿ ಯಲ್ಲಮ್ಮ ದೇವಿ ನೆಲೆಸಿದ್ದಾಳೆ ಎಂಬ ಸುದ್ದಿ ಹಬ್ಬಿದೆ. ಇವರ ಮನೆಯ ಗೋಡೆಯ ಮೇಲೆ ಯಲ್ಲಮ್ಮ ದೇವರ ಚಿತ್ರ ಮೂಡಿದ್ಯಂತೆ.
ಶೇಖವ್ವ ಮನೆಯ ಗೋಡೆ ಮೇಲೆ ಯಲ್ಲಮ್ಮ ದೇವಿ ಮುಖ ಮೂಡಿದ್ಯಂತೆ ಎಂಬ ಸುದ್ದಿ ಗ್ರಾಮದಲ್ಲೆಲ್ಲ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ಸುದ್ದಿ ಸಿಕ್ಕಿದ್ದೇ ತಡ, ಗ್ರಾಮಸ್ಥರೆಲ್ಲ ತಂಡೋಪತಂಡವಾಗಿ ಶೇಖವ್ವ ಹೆಳವರ್ ಮನೆಗೆ ಬರುತ್ತಿದ್ದಾರೆ. ಬಂದವರು ಗೋಡೆ ನೋಡಿ, ಕೈ ಮುಗಿದು ಉಧೋ ಉಧೋ ಯಲ್ಲವ್ವ ಉಧೋ ಎನ್ನುತ್ತಿದ್ದಾರೆ.