ವ್ಯಕ್ತಿಯನ್ನು ಕೊಂದು, ಅಂತ್ಯಸಂಸ್ಕಾರಕ್ಕೆ ಹಾಜರಾದ ಕಾಡಾನೆ!
ಹಾಸನ: ಕಾಡಾನೆ ದಾಳಿಯಿಂದ ಮೃತಪಟ್ಟಿದ್ದ ವ್ಯಕ್ತಿಯ ಅಂತ್ಯಸಂಸ್ಕಾರದ ವೇಳೆಯೂ ನರಹಂತಕ ಕಾಡಾನೆ ಪ್ರತ್ಯಕ್ಷವಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೆಳಗಳಲೆ ಗ್ರಾಮದಲ್ಲಿ ನಡೆದಿದೆ.
ಶನಿವಾರ ಕಾಡಾನೆ ದಾಳಿಯಿಂದ ಕೆಳಗಳಲೆ ಗ್ರಾಮದ ಕೃಷ್ಣೇಗೌಡ (63) ಸಾವನ್ನಪ್ಪಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಜನ, ಸಕಲೇಶಪುರದಲ್ಲಿ ರಸ್ತೆ ತಡೆಯನ್ನೂ ನಡೆಸಿ ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಶನಿವಾರ ಸಂಜೆ ಗ್ರಾಮದ ಹೊರವಲಯದಲ್ಲಿ ಕೃಷ್ಣೇಗೌಡರ ಅಂತ್ಯಸಂಸ್ಕಾರ ನಡೆಸುತ್ತಿದ್ದರು. ಈ ವೇಳೆ ಕಾಡಾನೆಯೊಂದು ಅಂತ್ಯಸಂಸ್ಕಾರ ನಡೆಯುತ್ತಿರುವ ಸಮೀಪ ಕಾಣಿಸಿಕೊಂಡಿದೆ. ಇದರಿಂದ ಅಲ್ಲಿದ್ದ ಜನರು ಆತಂಕಗೊಂಡಿದ್ದಾರೆ. ಬಳಿಕ ಜನರು ಜೋರಾಗಿ ಕಿರುಚುತ್ತಿದ್ದಂತೆ ಗಜ ಕಾಫಿತೋಟದೊಳಕ್ಕೆ ಸಾಗಿದೆ.