ಜೂ.೨೯: ಸಾಂತಾಕ್ರೂಜ್‌ನ ಶ್ರೀಪೇಜಾವರ ಮಠದಲ್ಲಿ ತಪ್ತ ಮುದ್ರಾ ಧಾರಣೆ ಪೇಜಾವಶ್ರೀ ೧೦೮ ವಿಶ್ವಪ್ರಸನ್ನ ಶ್ರೀಪಾದರಿಂದ ಪ್ರವಚನ-ಪ್ರಸಾದ ವಿತರಣೆ
ಮುಂಬಯಿ : ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ಶ್ರೀ ೧೦೮ ವಿಶ್ವಪ್ರಸನ್ನ ಶ್ರೀಪಾದಂಗಳವರು ಇದೇ ಜೂ.೨೯ರ ಬುಧವಾರ ಮುಂಬಯಿಗೆ ಆಗಮಿಸಲಿದ್ದು ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಭಕ್ತರನ್ನು ಅನುಗ್ರಹಿಸಲಿದ್ದಾರೆ.
ಅಂದು ಬೆಳಿಗ್ಗೆ ಶ್ರೀ ಪೇಜಾವರ ಮಠದ ಶಿಲಾಮಯ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಸನ್ನಿಧಿಯಲ್ಲಿ ವಿಶೇಷ ಪೂಜಾಧಿಗಳು ನೆರವೇರಲಿದ್ದು ಪೂರ್ವಾಹ್ನ ೧೦.೦೦ ಗಂಟೆಯಿಂದ ಮಧ್ವೇಶ ಭಜನಾ ಮಂಡಳಿ ಹಾಗೂ ಇತರ ಭಜನಾ ಮಂಡಳಿಗಳು ಭಜನೆ ನಡೆಸಲಿದ್ದಾರೆ. ೧೧.೦೦ ಗಂಟೆಯಿಂದ ತಪ್ತ ಮುದ್ರಾ ಧಾರಣೆ, ೧೨.೦೦ ಗಂಟೆಗೆ ಮಹಾಪೂಜೆ, ೧೨.೩೦ ಗಂಟೆಗೆ ಸಾರ್ವಜನಿಕ ಗೋಪೂಜೆ ತದನಂತರ ಶ್ರೀಗಳವರಿಂದ ಪ್ರವಚನ, ೧೨.೪೫ ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ.
ಶ್ರೀಗಳ ವಿಶೇಷ ಅನುಗ್ರಹಕ್ಕಾಗಿ ಶ್ರೀಗಳ ಗೋಶಾಲೆಗಳಿಗೆ ಧನ ಸಹಾಯವನ್ನು ಮಾಡಬಹುದು ನೀಲಾವರ, ಕೊಡವೂರು, ಹೆಬ್ರಿ ಇಲ್ಲಿ ವೃದ್ಧ ಗೋಶಾಲೆಗಳು ಇವೆ ಇಲ್ಲಿಯ ಗೋಶಾಲೆಗಳಿಗೆ ಧನ ಸಹಾಯ ಮಾಡಿ ಗೋಸೇವೆ ಗುರುಗಳ ಸೇವೆಯನ್ನು ಮಾಡುವ ಮುಖೇನ ಶ್ರೀ ಕೃಷ್ಣ ವಿಠ್ಠಲ ರಾಮದೇವರ ಪರಮಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಠದ ವಕ್ತಾರ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ತಿಳಿಸಿದ್ದಾರೆ.
ನಾಡಿನ ಸಮಸ್ತ ಭಕ್ತಾಭಿಮಾನಿಗಳು ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಈ ಮೂಲಕ ತಿಳಿಸಿದ್ದಾರೆ.