ಬಿಎಸ್‌ಕೆಬಿಎ ನವೀಕೃತ ಗೋಕುಲ ಮಂದಿರಕ್ಕೆ ಕುಕ್ಕೆ ಸುಬ್ರಹ್ಮಣ್ಯಶ್ರೀ ಭೇಟಿ ಗೋಕುಲದಲ್ಲಿ ನೆಲೆನಿಂತ ಶ್ರೀಕೃಷ್ಣ ನಮ್ಮೆಲ್ಲರ ಭಾಗ್ಯವಾಗಿದೆ : ವಿದ್ಯಾಪ್ರಸನ್ನಶ್ರೀ
ಮುಂಬಯಿ: ಕೃಷ್ಣ ಎಂಬುವುದು ಅತಿಶೀಘ್ರವಾಗಿ ಅನುಗ್ರಹ ಮಾಡತಕ್ಕಂತಹ ಒಂದು ವಿಶಿಷ್ಟವಾದ ಆರಾಧ್ಯರು. ಗೋಪಿಕಾ ಸ್ತ್ರಿಯರಿಂದ ಅರ್ಚನೆ ಮಾಡತಕ್ಕಂತಹ ಭಾಗ್ಯ ಶ್ರೀಕೃಷ್ಣನದ್ದು. ಎಲ್ಲಕ್ಕಿಂತಲೂ ಕ್ಷೀರಸಾಗರವನ್ನೆಲ್ಲಾ ಬಿಟ್ಟು ಕೇವಲ ಉಡುಪಿಯಲ್ಲಿ ನೆಲೆನಿಂತ ಶ್ರೀಕೃಷ್ಣ ನಮ್ಮೆಲ್ಲರ ದೊಡ್ಡ ಭಾಗ್ಯವಾಗಿದೆ.
ಶ್ರೀಕೃಷ್ಣ ಅಧ್ಬುತವಾದ ಭಗವಂತನ ಅವತಾರನಾಗಿದ್ದಾನೆ. ಅಂತಹ ಶ್ರೀಕೃಷ್ಣನ ಅವತಾರವನ್ನು ನಾವು ಕಲಿಯುಗದಲ್ಲಿ ವಿಶೇಷವಾಗಿ ಉಪಾಸನೆ ಮಾಡುವುದರಿಂದ ನಮಗೆ ವಿಶೇಷವಾದ ಸಿದ್ಧಿ ಅನುಗ್ರಹವಾಗುತ್ತದೆ. ಅನೇಕ ವಿಧವಾದ ದುಷ್ಕರ್ಮಗಳ ಫಲ ಪರಿಹಾರವಾಗುತ್ತದೆ. ಅಂತಹ ಶ್ರೀಕೃಷ್ಣನಿಗೆ ಮುಂಬಯಿಯಲ್ಲಿನ ಗೋಕುಲದಲ್ಲಿ ಒಳ್ಳೆಯ ಜಾಗ ಸಿಕ್ಕಿದೆ. ಎಲ್ಲಿ ಭಗವಂತ ವಿಶಿಷ್ಟವಾದ ಸನ್ನಿಧಾನವನ್ನು ಪಡೆಯುತ್ತಾನೋ ಅಲ್ಲಿ ಬೇಗ ಅನುಗ್ರಹವಾಗುತ್ತದೆ. ಅಂತಹ ವಿಶಿಷ್ಟವಾದ ಸ್ಥಾನಕ್ಕೆ ತಕ್ಕಂತೆ ಈ ಗೋಕುಲವಾಗಿದೆ ಎಂದು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್‌ಸ್ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಂಸ್ಥೆಗಳ ಪುನರಾಭಿವೃದ್ಧಿಯೊಂದಿಗೆ ಹೊಚ್ಚೊಸತಾಗಿ ನಿರ್ಮಾಣಗೊಂಡ ಗೋಕುಲ ಮಂದಿರಕ್ಕೆ ಜೂ.27ರಂದು ಸೋಮವಾರ ಸಂಜೆ ವಿದ್ಯಾಪ್ರಸನ್ನಶ್ರೀ ಚರಣ ಸ್ಪರ್ಶಗೈದು ಗೋಕುಲ ಮಂದಿರದಲ್ಲಿ ಪುನ:ರ್ ಪ್ರತಿಷ್ಠಾಪಿತ ಶ್ರೀ ಗೋಪಾಲಕೃಷ್ಣ ದೇವರಿಗೆ ಆರತಿ ಬೆಳಗಿಸಿ ನೆರದ ಸದ್ಭಕ್ತರನ್ನು ಆಶೀರ್ವಚಿಸಿದರು.
ಸಾವಿರಾರು ಜನರು ಅನ್ನ ನೀರು ಬಿಟ್ಟು ಪಂಚಾವನದಲ್ಲಿ ತಪಸ್ಸು ಮಾಡಿ ಕೊನೆ ಕಾಲದಲ್ಲಿ ಭಗವಂತನು ಒಲಿಯುತ್ತಾನೆ ಎಂಬಂತೆ ಡಾ| ಸುರೇಶ್ ರಾವ್ ಮತ್ತು ವಿಪ್ರ ಸಮಾಜದ ದೀರ್ಘವಾದ ತಪಸ್ಸಿಗೆ ಅಲ್ಪವಾದ ಫಲವೇ ಈ ಗೋಕುಲ. ಇಂತಹ ಸನ್ನಿಧಾನಗಳಲ್ಲಿ ಬೆಳಿಗ್ಗೆ ಹಾಗೂ ಮುತ್ಸಂಜೆ ಹೊತ್ತು ಎರಡು ಸಲ ದೀಪಹಚ್ಚಿ ಎರಡು ಗೀತೆಗಳು ಹಾಡಿದರೂ ದೇವರು ಒಳಿಯುವಂತಿದೆ ಈ ಮಂದಿರ. ನಮಗೆ ಅನ್ನ ನೀರು ಬಿಟ್ಟು ದೀರ್ಘ ಕಾಲ ಉಪವಾಸ ಮಾಡಲು ಸಾಧ್ಯವಿಲ್ಲ. ಆದರೆ ೨೪ ಗಂಟೆಗಳಲ್ಲಿ ಸ್ವಲ್ಪ ಸಮಯವನ್ನಾದರೂ ದೇವರಿಗೆ ಕೊಡುವುದರಿ ಂದ ಆನಂತ ಫಲ ಶ್ರೀಹರಿ ನೀಡುವನು ಎಂದೂ ಸುಬ್ರಹ್ಮಣ್ಯಶ್ರೀ ತಿಳಿಸಿದರು.
ಗುಲಾಬಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ, ಅಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ, ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ವಿಜಯಲಕ್ಷ್ಮೀ ಎಸ್.ರಾವ್ ದಂಪತಿ ಶ್ರೀಗಳ ಪಾದ ಪೂಜೆಗೈದರು. ಡಾ| ಸುರೇಶ್ ರಾವ್ ಮತ್ತು ಕಾರ್ಯದರ್ಶಿ ಎ.ಪಿ.ಕೆ ಪೋತಿ ಶ್ರೀಪಾದರನ್ನು ಪುಷ್ಫಗುಪ್ಚವನ್ನಿತ್ತು ಸ್ವಾಗತಿಸಿ ಗೋಕುಲ ಬ್ರಹ್ಮಕಲಶೋತ್ಸವದ ಹಿರಿಯ ಪತ್ರಕರ್ತ ಕೆ.ಎಲ್ ಕುಂಡಂತಾಯ ಸಂಪಾದಕತ್ವದ ಸ್ಮರಣ ಸಂಚಿಕೆ `ಶ್ರೀ ಕೃಷ್ಣ ದರ್ಶನ’ ನೀಡಿ ಗೌರವಿಸಿದರು. ನವೀಕೃತ ದೇವಸ್ಥಾನದ ವೈಶಿಷ್ಟ÷್ಯತೆ ಮತ್ತು ಸಂಕೀರ್ಣದ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು.
ಗೋಕುಲದ ಪ್ರಧಾನ ಆರ್ಚಕ ವೇ| ಮೂ| ಶ್ರೀನಿವಾಸ ಭಟ್ ಧರೆಗುಡ್ಡೆ ಹಾಗೂ ಗೋಕುಲದ ಪ್ರಧಾನ ಆರ್ಚಕ ಗೋಪಾಲ ಭಟ್ ಕಿದಿಯೂರು ಪೂಜೆ ನೆರವೇರಿಸಿ ಮಹಾ ಆರತಿಗೈದು ತೀರ್ಥ ಪ್ರಸಾದ ನೀಡಿ ಹರಸಿದರು. ಸರಸ್ವತಿ ಸಭಾಗೃಹ, ಇಡೀ ಸಂಕೀರ್ಣ, ವ್ಯವಸ್ಥಿತವಾಗಿ ನಿರ್ಮಿಸಲಾದ ಉಗ್ರಾಣ, ಪಾಕಶಾಲೆಗಳನ್ನು ವೀಕ್ಷಿಸಿದ ಶ್ರೀಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಎಸ್‌ಕೆಬಿಎ ಉಪಾಧ್ಯಕ್ಷೆ ಶೈಲಿನಿ ರಾವ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಜೆರಿಮೆರಿ ಎಸ್.ಎನ್ ಉಡುಪ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಡಾ| ಸಹನಾ ಎ.ಪೋತಿ ಮತ್ತಿತರ ಪದಾಧಿಕಾರಿಗಳು, ಪಿ.ಉಮೇಶ್ ರಾವ್, ಎಸ್.ಆರ್.ವಿ ಕಲ್ಲೂರಾಯ, ಸ್ಮೀತಾ ಭಟ್, ಶಾಂತಳಾ ಎಸ್.ಉಡುಪ, ಶಕುಂತಳಾ ಸಾಮಗ, ಸುಧೀರ್ ಆರ್.ಎಲ್ ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಮಹಮ್ಮದ್ ಗೌಸೆ, ಬಾಲ ರಾವ್ ಭಾಂಡೂಪ್, ತಾರಾ ಭುಜಂಗ ರಾವ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.