ಕರುನಾಡ ಹಿರಿಯ ರಾಜಕಾರಣಿ ಎ.ಜಿ ಕೊಡ್ಗಿ ನಿಧನ ಎ.ಜಿ. ಕೊಡ್ಗಿ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ
ಮುಂಬಯಿ : ಉಡುಪಿ ಜಿಲ್ಲೆಯ ಕುಂದಾಪುರದ ಮಾಜಿ ಶಾಸಕ, ೩ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ, ಕರ್ಣಾಟಕ ಬ್ಯಾಂಕ್‌ನ ಮಾಜಿ ನಿರ್ದೇಶಕ ಆಗಿದ್ದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (೯೩.) ಅವರು ವಯೋ ಸಹಜತೆ ಹಾಗೂ ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಎ.ಜಿ ಕೊಡ್ಗಿ, ರಾಷ್ಟ್ರೀಯ ಮಟ್ಟದವರೆಗೂ ಸಂಪರ್ಕವನ್ನು ಹೊಂದಿದ್ದರು. ಕರಾವಳಿಯ ಬೀಷ್ಮ ಎಂದೇ ಜನಜನಿತರಾಗಿದ್ದ ಅವರು ಕಳೆದ ಕೆಲ ವರ್ಷಗಳಿಂದ ಸಕ್ರೀಯ ರಾಜಕಾರಣದಿಂದ ದೂರವಾಗಿ ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ತಾಲೂಕು ಬೋರ್ಡ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಎಂಟು ವರ್ಷ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಮಂಗಳೂರು ಜಿಲ್ಲಾ ಪರಿಷತ್ ಸದಸ್ಯ, ಆರ್ಥಿಕ ಸಮಿತಿ ಸದಸ್ಯ, ೧೯೭೨-೮೩ರ ತನಕ ಬೈಂದೂರು ಶಾಸಕ, ೨೦೦೬-೦೮ರ ತನಕ ರಾಜ್ಯ ಮೂರನೇ ಹಣಕಾಸು ಆಯೋಗ ಅಧ್ಯಕ್ಷ, ಬಳಿಕ ಅದರ ಕಾರ್ಯಪಡೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಛಾತಿ ಮೂಡಿಸಿರುವ ಕೊಡ್ಗಿ, ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷ, ಎಪಿಎಂಪಿ ಅಧ್ಯಕ್ಷ, ಮಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಸ್ಕಾ ್ಯಮ್ಸ್ ನಿರ್ದೇಶಕ, ಮಂಗಳೂರು ಎಪಿಎಂಸಿ ಅಧ್ಯಕ್ಷ ಅಲ್ಲದೆ ರಾಜ್ಯ ಮಾರ್ಕೆಟಿಂಗ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೨-೧೯೯೦ರ ತನಕ ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಸೇವೆ ನೀಡಿದ್ದಾರೆ.
ಕರಾವಳಿ ಜಿಲ್ಲೆಯ ರಾಜಕೀಯ ಚದುರಂಗದಾಟದಲ್ಲಿ ಕೊಡ್ಗಿ ಎತ್ತಿದ ಕೈ. ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಭೇದಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪರಿ ಅದ್ವಿತೀಯ. ಕಾಂಗ್ರೆಸ್ ಪಕ್ಷದಲ್ಲಿರುವಾಗ ಜಿಲ್ಲಾ ಕಾಂಗ್ರೆಸ್ ಸದಸ್ಯ, ರಾಜ್ಯ ಕಾಂಗ್ರೆಸ್ ಸದಸ್ಯರಾಗಿ ದುಡಿದವರು. ಕಾಂಗ್ರೆಸ್‌ನಲ್ಲಿದ್ದಾಗ ತಮ್ಮ ನಿಲುವುಗಳಿಗೆ ಧಕ್ಕೆಯುಂಟಾದಾಗ ೧೯೯೩ರಲ್ಲಿ ಬಿಜೆಪಿಗೆ ಬಂದ ಕೊಡ್ಗಿ ಬಿಜೆಪಿ ಕುಂದಾಪುರ ತಾಲೂಕು ಅಧ್ಯಕ್ಷ, ಜಿಲ್ಲಾಧ್ಯಕ್ಷ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ ಸುನಂದಾ, ಓರ್ವ ಪುತ್ರಿ, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಎ.ಕಿರಣ ಕುಮಾರ್ ಕೊಡ್ಗಿ, ಕ್ಯಾಂಪ್ಕೋ ಅಧ್ಯಕ್ಷ ಎ.ಕಿಶೋರ್ ಕುಮಾರ ಕೊಡ್ಗಿ ಸೇರಿದಂತೆ ಐದು ಮಂದಿ ಪುತ್ರರನ್ನು ಅಗಲಿದ್ದಾರೆ. ಕೋಡ್ಗಿ ನಿಧನಕ್ಕೆ ಕರಾವಳಿಯ ರಾಜಕೀಯ ಮುಖಂಡರು, ಉದ್ಯಮಿಗಳು, ಗಣ್ಯರುಗಳು ಸಂತಾಪ ಸೂಚಿಸಿದ್ದಾರೆ.
ಎ.ಜಿ. ಕೊಡ್ಗಿ ಅವರ ನಿಧನಕ್ಕೆ ವೀರೇಂದ್ರ ಹೆಗ್ಗಡೆ ಸಂತಾಪ ಎ.ಜಿ. ಕೊಡ್ಗಿ ಅವರ ನಿಧನದ ಸುದ್ದಿ ತಿಳಿದು ವಿಷಾದವಾಯಿತು ಎಂದು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೂರನೆ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾಗಿ, ಶಾಸಕರಾಗಿ, ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾಗಿ ಗ್ರಾಮೀಣ ಪ್ರದೇಶದ ಸರ್ವತೋಮುಖ ಪ್ರಗತಿಗೆ ಅವರು ವಿಶೇಷವಾಗಿ ಶ್ರಮಿಸಿದ್ದಾರೆ. ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಸೋಲಾರ್ ದೀಪ ಅಳವಡಿಕೆ, ರಸ್ತೆಗಳ ಅಭಿವೃದ್ಧಿ, ಕೃಷಿಯಲ್ಲಿ ಪ್ರಗತಿಯೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮದ ಪ್ರಗತಿಗೆ ಅವರು ಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.
ಅವರ ದೇಶಪ್ರೇಮ, ಸಮಾಜಮುಖಿ ಚಿಂತನೆಗಳು, ರಾಜಕೀಯವಾಗಿ ಅವರು ತಳೆದ ದೃಢ ನಿಲುವುಗಳು ಪ್ರಶಂಸನೀಯವಾಗಿವೆ. ಹಿರಿಯ ನಾಗರಿಕರಾಗಿಯೂ, ನಮ್ಮ ಕ್ಷೇತ್ರದ ಅಭಿಮಾನಿ ಭಕ್ತರಾಗಿಯೂ ನನಗೆ ಅವರು ಹಲವು ವರ್ಷಗಳಿಂದ ಚಿರಪರಿಚಿತರು ಹಾಗೂ ಆತ್ಮೀಯರಾಗಿದ್ದಾರೆ. ಅವÀರ ಅನೇಕ ಕಾರ್ಯಕ್ರಮಗಳಿಗೆ ನಮ್ಮಕ್ಷೇತ್ರದ ವತಿಯಿಂದ ನೆರವು ನೀಡಿ ಪ್ರೋತ್ಸಾಹಿಸಿದ್ದೇವೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಅಗಲುವಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾಥಿüðಸುತ್ತೇನೆ ಎಂದು ಸಂತಾಪ ಸೂಚನಾ ಪತ್ರದಲ್ಲಿ ಡಾ| ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.