ಮುಂಬಯಿ: ಕರ್ನಾಟಕದ ರಾಜಧಾನಿ ಬೆಂಗಳೂರು ಅಲ್ಲಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಕಳೆದ ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಾರ್ಷಿಕ ‘ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ-೨೦೨೨’ ಪುರಸ್ಕಾರ ಪ್ರದಾನ ಸಮಾರಂಭ ಆಯೋಜಿಸಿತ್ತು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ನಾಟಕ ಉಚ್ಛನ್ಯಾಯಲಯದ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ಅರಳಿ ನಾಗರಾಜ್, ಕರ್ನಾಟಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ| ಮಹೇಶ್ ಜೋಶಿ, ಪ್ರಸಿದ್ಧ ಚಲನಚಿತ್ರ ಅಭಿನೇತ್ರಿ ಪದ್ಮಶ್ರೀ ಭಾರತಿ ವಿಷ್ಣುವರ್ಧನ್, ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ| ಹೆಚ್.ಎಲ್.ಎನ್ ರಾವ್ ಉಪಸ್ಥಿತರಿದ್ದು ತುಳು ಕನ್ನಡ ಸಂಘಟಕ ರಮೇಶ್ ಕಿದಿಯೂರು ಅವರಿಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡು ನುಡಿ ಕಲೆ ಸಂಸ್ಕೃತಿಯ ಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿಗೆ ಈ ಸಾರಿ ಅನಿವಾಸಿ ತುಳು ಕನ್ನಡ ಸಂಘಟಕ ಕುವೈಟ್ ನ ರಮೇಶ್ ಕಿದಿಯೂರು ಭಾಜನರಾಗಿದ್ದಾರೆ. ಶ್ರೀಯುತ ರಮೇಶ್ ಕಿದಿಯೂರು ಅವರು ಕುವೈಟ್ ನಲ್ಲಿ ತುಳು ಮತ್ತು ಕನ್ನಡ ಭಾಷಾ ಪ್ರೇಮಿಯಾಗಿ, ಸಂಘಟಕರಾಗಿ ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನಿಸಲಾಗಿದೆ.
ಸ್ವತಃ ಕ್ರೀಡಾಪಟುವಾಗಿದ್ದ ಶ್ರೀಯುತರು ಅನೇಕ ಕ್ರೀಡಾಕೂಟಗಳನ್ನು ಆಯೋಜಿಸಿದ್ದಾರೆ. ೨೦೧೩ರಲ್ಲಿಯೇ ಕುವೈಟ್‌ನಲ್ಲಿ ವಿಶ್ವ ತುಳು ಸಮ್ಮೇಳನ ಆಯೋಜಿಸಿದ ಕೀರ್ತಿ ಇವರದ್ದು. ತುಳುಕೂಟ ಕುವೈಟ್ ವತಿಯಿಂದ ಉಡುಪಿ ಆಸ್ಪತ್ರೆಗೆ ಆಂಬುಲೆನ್ಸ್ ಮತ್ತು ಡಯಾಲಿಸಿಸ್ ಯಂತ್ರಗಳನ್ನು ಒದಗಿಸಿ ಕೊಟ್ಟು ಸಾಮಜಿಕ ಕಳಕಳಿ ಮತ್ತು ಜವಾಬ್ದಾರಿ ತೋರಿದವರು. ಯಕ್ಷಗಾನ, ನಾಟಕ ಕಲಾವಿದರಿಗೆ ವಿದೇಶದಲ್ಲಿ ವೇದಿಕೆ ದೊರಕಿಸಿಕೊಟ್ಟು ನಮ್ಮ ಕಲೆಯನ್ನು ವಿಶ್ವದ ಬೇರೆಡೆಗೆ ಕೊಂಡೊಯ್ಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದವರು. ಉಡುಪಿ ಕಿದಿಯೂರಿನ ನಿವಾಸಿಯಾದ ರಮೇಶ್ ಕಿದಿಯೂರು ಅವರು ತನ್ನ ಹುಟ್ಟೂರು ಮತ್ತು ಕನ್ನಡ ತುಳು ಭಾಷೆಯ ಬಗ್ಗೆ ಅತೀವ ಪ್ರೀತಿ ಕಾಳಜಿ ಯನ್ನು ಇಂದಿಗೂ ಮುಂದುವರಿಸಿ ಕೊಂಡು ಬಂದಿದ್ದಾರೆ. ಅರ್ಹವಾಗಿಯೇ ಅವರಿಗೆ ಈ ಬಾರಿಯ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಒಲಿದು ಬಂದಿದ್ದು ಹರ್ಷ ತಂದಿದೆ ಎಂದು ಐ-ಲೇಸಾ ತಂಡದ ಶಾಂತಾರಾಮ್ ಶೆಟ್ಟಿ ಬೆಂಗಳೂರು, ಪ್ರಸಿದ್ಧ ಗಾಯಕ ಡಾ| ರಮೇಶ್ಚಂದ್ರ, ಐ-ಲೇಸಾ ಮುಂಬಯಿ ಸಂಯೋಜಕ ಸೂರಿ ಮಾರ್ನಾಡ್ ತಿಳಿಸಿದ್ದಾರೆ.
