ಮುಂಬಯಿ: ಕರ್ನಾಟಕದ ೭೧ನೇ ಕನ್ನಡ ರಾಜ್ಯೋತ್ಸವದ ಶುಭಾವಸರದಿ ಸಾಫಲ್ಯ ಸೇವಾ ಸಂಘ ಮುಂಬಯಿ ಮತ್ತು ಶ್ರೀನಿವಾಸ್ ವೆಲ್ಫೇರ್ ಫೌಂಡೇಶನ್ ಇದರ ಅಧ್ಯಕ್ಷ ಸಿಎ| ಶ್ರೀನಿವಾಸ ಪದ್ಮನಾಭ ಸಫಲ್ಯ ಇವರ ಅನುಪಮ ಸಮಾಜ ಸೇವೆಗಾಗಿ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ-೨೦೨೬ ಪ್ರಾಪ್ತಿಸಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತವು ಕಳೆದ (ಭಾನುವಾರ) ಮಂಗಳೂರುನ ನೆಹರೂ ಮೈದಾನದಲ್ಲಿ ಜಿಲ್ಲಾ ರಾಜ್ಯೋತ್ಸವ ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಇಲಾಖೆಗಳ ಸಚಿವ,  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವರಿ ಸಚಿವ (ಕರ್ನಾಟಕ ಮಾಜಿ ವಿಧಾನಸಭಾಧ್ಯಕ್ಷ) ಶ್ರೀ ಯು.ಟಿ ಖಾದರ್ ಫರೀದ್ ಮತ್ತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಸಿಎ| ಶ್ರೀನಿವಾಸ ಪಿ. ಸಫಲ್ಯ ಇವರಿಗೆ ಶಾಲು ಹೊದಿಸಿ ಪೇಟ ತೊಡಿಸಿ, ಪ್ರಶಸ್ತಿ ಫಲಕ ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿದರು.  

ಕಾರ್ಯಕ್ರಮದಲ್ಲಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್‌ಕುಮಾರ್ ದಾಸ್, ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾ ನ್ಲಿ ಅಲ್ವಾರಿಸ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಹಾಗೂ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಉಪಸ್ಥಿತರಿದ್ದರು. ಪೊಲೀಸ್ ಪಡೆ, ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾಥಿಗಳು ಆಕರ್ಷಕ ಪಥಸಂಚಲನ (ಮಾರ್ಚ್‌ಪಸ್ಟ್) ನಡೆಸಿದರು.


ಸಿಎ| ಶ್ರೀನಿವಾಸ ಪದ್ಮನಾಭ ಸಫಲ್ಯ:


ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ರಾಯಿ ಪರಿಸರದ ಶ್ರೀನಿವಾಸ್ ಸಫಲ್ಯ ಅವರು ಬಾಲ್ಯದಲ್ಲಿಯೇ ಸವಾಲುಗಳನ್ನು ಎದುರಿಸುತ್ತಾ, ಶಿಕ್ಷಣ ಹಾಗೂ ಜೀವನದಲ್ಲಿ ಸಾಧನೆಯ ಹಾದಿಯನ್ನು ಶ್ರಮಿಸಿದವರು. ರಾಯಿ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯವರೆಗೆ ಹಾಗೂ ಕೊಯಿಲ ಪ್ರೌಢಶಾಲೆಯಲ್ಲಿ ಏಳನೇ ತರಗತಿಯವರೆಗೆ ಶಿಕ್ಷಣ ಪಡೆದ ಅವರು, ಉದ್ಯೋಗದ ಅನ್ವೇಷಣೆಯಲ್ಲಿ ಮುಂಬಯಿ ಮಹಾನಗರಕ್ಕೆ ಆಗಮಿಸಿದರು.

ಉದ್ಯೋಗದ ಜೊತೆಗೆ ಶಿಕ್ಷಣವನ್ನೂ ಮುಂದುವರಿಸಬೇಕೆಂಬ ಛಲ ಹೊಂದಿದ್ದ ಅವರು ಹಗಲಿನಲ್ಲಿ ಕೆಲಸ ಮಾಡುತ್ತಾ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಮುಂಬಯಿನ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯಲ್ಲಿ ಹತ್ತನೇ ತರಗತಿ ಹಾಗೂ ಕನ್ನಡ ಭವನ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಶಿಕ್ಷಣ ಪೂರೈಸಿ, ಬಳಿಕ ಮುಂಬಯಿನ ಪ್ರತಿಷ್ಠಿತ ಸೇಂಟ್ ಕ್ಸೇವಿಯರ್ ಕಾಲೇಜ್‌ನಲ್ಲಿ ವಾಣಿಜ್ಯ ಪದವಿ ಪಡೆದು, ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್‌ಬಿ) ಸಂಸ್ಥೆಯಲ್ಲಿ ಎಂಬಿಎ ಪದವಿಯನ್ನೂ ಗಳಿಸಿ, ಚಾರ್ಟರ್ಡ್ ಅಕೌಂಟೆಂಟ್ ಆಗಿಯೂ ಅರ್ಹತೆ ಪಡೆದಿದ್ದಾರೆ. ಅವರ ಈ ಶೈಕ್ಷಣಿಕ ಪಯಣ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸಾಧಿಸುವ ಛಲಕ್ಕೆ ಸಾಕ್ಷಿಯಾಗಿದೆ.

ಸುಮಾರು ಮೂರು ದಶಕಗಳಿಂದ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀನಿವಾಸ ಸಫಲ್ಯ ಅವರು ಸಂಘಟನಾ ಚಾತುರ್ಯ, ನಾಯಕತ್ವ ಹಾಗೂ ಸಮಾಜದ ಏಳಿಗೆಯ ಬಗೆಗಿನ ಕಾಳಜಿಯಿಂದ ಗುರುತಿಸಿಕೊಂಡಿದ್ದಾರೆ. ಮುಂಬಯಿನ ೮೬ ವರ್ಷಗಳ ಇತಿಹಾಸ ಹೊಂದಿರುವ ಸಾಫಲ್ಯ ಸೇವಾ ಸಂಘದಲ್ಲಿ ವಿವಿಧ ಹುದ್ದೆಗಳನ್ನಲಂಕರಿಸಿ ಪ್ರಸ್ತುತ ಒಂಬತ್ತು ವರ್ಷಗಳ ಕಾಲ ಅಧ್ಯಕ್ಷರಾಗಿದ್ದಾರೆ. ಸಾಫಲ್ಯ ಸಮುದಾಯಕ್ಕೆ ಮಹಾರಾಷ್ಟ್ರ ದಲ್ಲಿ ಇತರ ಹಿಂದುಳಿದ ವರ್ಗಗಳ (ಓಬಿಸಿ) ಮಾನ್ಯತೆ ದೊರಕಿಸುವ ಪ್ರಯತ್ನಗಳಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದಾರೆ.

ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ಮಲಾಡ್, ತುಳು ಸಂಘ ಬೋರಿವಲಿ, ಕರ್ನಾಟಕ ಸಂಘ ಮುಂಬಯಿ (ಮಾಟುಂಗ), ಗೋರೆಗಾಂವ್ ಕರ್ನಾಟಕ ಸಂಘ ಸೇರಿದಂತೆ ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಕನ್ನಡ-ತುಳು ಭಾಷೆ, ಸಂಸ್ಕೃತಿ ಹಾಗೂ ಸಮುದಾಯದ ಚಟುವಟಿಕೆಗಳಲ್ಲಿ, ಧಾರ್ಮಿಕ ಕ್ಷೇತ್ರದಲ್ಲಿ ಮೂರು ದಶಕಗಳ ಅನುಪಮ ಸೇವೆಯೊಂದಿಗೆ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಶ್ರೀನಿವಾಸ ಸಾಫಲ್ಯ ಅವರ ಕೊಡುಗೆ ಸ್ಮರಣೀಯವಾಗಿದೆ. ನಾಡಿನ ಕಲೆ, ಸಾಹಿತ್ಯ ಹಾಗೂ ಜಾನಪದ ಪರಂಪರೆಯ ಪ್ರಚಾರ ಮತ್ತು ಪ್ರಸಾರಕ್ಕೆ ಶ್ರಮಿಸಿದ್ದಾರೆ.ಶಿಕ್ಷಣ ಹಾಗೂ ಬಡ ವಿದ್ಯಾಥಿsಗಳ ಬದುಕಿಗೆ ಆಸರೆಯಾಗಿದ್ದು ಸುಮಾರು ಮೂರು ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ಪದ್ಮನಾಭ ಸಾಫಲ್ಯ ಅವರು ಬಹುಮುಖ ವ್ಯಕ್ತಿತ್ವದ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.

By Suddi9