ಬಂಟ್ವಾಳ:ಭಾಷೆ ಉಳಿಯಬೇಕಾದರೆ ದಿನನಿತ್ಯ ಕನ್ನಡದಲ್ಲಿ ಮಾತನಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕರ್ನಾಟಕದಲ್ಲಿ ಬಹುಭಾಷೆಗಳು ಇದ್ದರೂ ಸಾಮರಸ್ಯ ಇದೆ. ಬಹುಭಾಷಾ ಕಲಿಕೆಯಿಂದ ಜ್ಞಾನ ವಿಸ್ತಾರವಾಗುತ್ತದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಲು ಶಿಕ್ಷಣದಲ್ಲಿ 5ನೇ ತರಗತಿಯವರೆಗೆ ಭಾಷಾ ಕಲಿಕೆ ಮತ್ತು ಗಣಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಚಿಂತಕ ವಿಮರ್ಶಕ ಡಾ. ಅಜಕ್ಕಲ ಗಿರೀಶ ಭಟ್ ಹೇಳಿದರು.

ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ ಇದರ ವತಿಯಿಂದ ಏರ್ಪಡಿಸಲಾದ ಕನ್ನಡ ಸಾಧಕರ ಸಮ್ಮಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ವಿದ್ಯಾಕೇಂದ್ರದ ವೇದವ್ಯಾಸ ಧ್ಯಾನ ಮಂದಿರದಲ್ಲಿ ಏರ್ಪಡಿಸಲಾದ ಕಾರ್ಯಕ್ರಮವನ್ನು ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಮೊದಲ ಗೋಷ್ಠಿಯಲ್ಲಿ ಅ.ಭಾ.ಸಾ.ಪ ಕರ್ನಾಟಕದ ಅನುವರ್ತಿ ಕಾರ್ಯ ಪ್ರಮುಖ್ ರಘು ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು. ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಸಮಾರೋಪ ಭಾಷಣ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ತ್ಯಾಗ ಮನೋಭಾವದಿಂದ ಕೆಲಸ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ ಸಾಧನೆ ಉಳಿದವರಿಗೂ ಪ್ರೇರಣೆಯಾಗಲಿ ಎಂದರು. ಅ.ಭಾಸಾ.ಪ. ಕರ್ನಾಟಕ ರಾಜ್ಯ ಅಧ್ಯಕ್ಷ ಸಾಹಿತಿ ಎಸ್.ಜಿ.ಕೋಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನಾರಾಯಣ ಶೇವಿರೆ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮುಕುಂದ ಮೇಷ್ಟುç ಬೆಂಗಳೂರು (ಶಿಕ್ಷಣ), ವೆಂಕಟೇಶ ಮರೇಗುದ್ದಿ ಹುಬ್ಬಳ್ಳಿ (ಜಾಗೃತಿ), ಬಿ.ಟಿ. ರಾಜೇಂದ್ರ ರಾಮನಗರ (ಪರಿಚಾರಿಕೆ), ವಿಶ್ವನಾಥ ಶರ್ಮ ಹಾಸನ (ಉಚ್ಚಾರಣೆ), ಜಿ ಕೆ ವೆಂಕಟೇಶ ಮೂರ್ತಿ ಬೆಂಗಳೂರು ( ಕೈಬರಹ) ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಪ್ರಮುಖರಾದ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಕಾರ್ಯನಿರ್ವಾಹಣಾಧಿಕಾರಿ ಕೃಷ್ಣ ಪ್ರಸಾದ್ ಕಾಯರ್ಕಟ್ಟೆ , ಮುಖ್ಯೋಪಾಧ್ಯಾಯ ರವಿರಾಜ ಕಣಂತೂರು , ಡಾ. ಕಮಲ ಪ್ರಭಾಕರ ಭಟ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕು ಅ.ಭಾ.ಸಾ.ಪಂ. ಅಧ್ಯಕ್ಷೆ ರೇಷ್ಮಾ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಮಧುರಾ ಕಲ್ಲಡ್ಕ ನಿರೂಪಿಸಿದರು. ಅಶೋಕ ಕಡೇಶ್ವಾಲಯ,ರಮೇಶ ಬಾಯಾರ್ ವಂದಿಸಿದರು.
