ಆರ್ ಎಸ್ ಎಸ್ ವಿರುದ್ಧ ಮಾತು ಸಲ್ಲದು ನಾಲಗೆ ಬಿಗಿ ಹಿಡಿದು ಮಾತನಾಡಿ: ಡಾ.ಪ್ರಭಾಕರ ಭಟ್ ಕಲ್ಲಡ್ಕ ಎಚ್ಚರಿಕೆ
ಬಂಟ್ವಾಳ: ಕಳೆದ ೯೭ ವರ್ಷಗಳಿಂದ ದೇಶಕ್ಕಾಗಿ ಬದುಕು ನಡೆಸುವುದರ ಜೊತೆಗೆ ಕೋಟಿ ಕೋಟಿ ಜನರನ್ನು ದೇಶಕ್ಕೋಸ್ಕರ ಬದುಕಲು ಪ್ರೇರಣೆ ನೀಡುತ್ತಿರುವ ಏಕೈಕ ಸಮಾಜ ಸೇವಾ ಸಂಘಟನೆ ಆರ್ ಎಸ್ ಎಸ್ ಬಗ್ಗೆ ಅನಗತ್ಯ ಹೇಳಿಕೆ ನೀಡುತ್ತಿರುವ ರಾಜಕಾರಣಿಗಳು ನಾಲಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಕಲ್ಲಡ್ಕ ಸಮೀಪದ ಸುಧೇಕ್ಕಾರು ದೈವಸ್ಥಾನ ಬಳಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರಥಮ ಪ್ರತಿಕ್ರಿಯೆ ನೀಡಿದರು. ಈ ಹಿಂದೆ ಮುಸ್ಲಿಂ ದೇಶಕ್ಕೆ ಹೊರಟ ಎರಡು ವಿಮಾನಗಳು ರಾಜಸ್ತಾನದಲ್ಲಿ ದುರಂತಕ್ಕೀಡಾದ ವೇಳೆ ಅಲ್ಲಿಗೆ ತೆರಳಿದ್ದ ಆರ್ ಎಸ್ ಎಸ್ ಕಾರ್ಯಕರ್ತರು ಮುಸ್ಲಿಮರ ಮೃತ ಶರೀರ ಮತ್ತು ಚಿನ್ನಾಭರಣಗಳನ್ನು ಮೃತರ ಕುಟುಂಬಕ್ಕೆ ತಲುಪಿಸಿದ ಬಗ್ಗೆ ಅಂದಿನ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದರು. ಪ್ರತಿನಿತ್ಯ ಭಾರತ್ ಮಾತಾ ಕಿ ಜೈ ಎನ್ನುವ ದೇಶಪ್ರೇಮಿ ಸಂಘಟನೆ ಬಗ್ಗೆ ದೇಶ ವಿಭಜನೆ ಮಾಡಿದವರು ಸೇರಿದಂತೆ ಪಾಕಿಸ್ತಾನ ಮತ್ತು ಇಟಲಿಗೆ ಜೈಕಾರ ಹಾಕುವವರಿಗೆ ಏನು ಗೊತ್ತು…? ಎಂದು ಅವರು ಪ್ರಶ್ನಿಸಿದರು.
ರೋಹಿತ್ ಚಕ್ರತೀರ್ಥ ಪರಿಷ್ಕರಿಸಿದ ಪಠ್ಯಪುಸ್ತಕ ಓದಿ ನೋಡದೆಯೇ ಅನಗತ್ಯ ಟೀಕೆ ಮಾಡುತ್ತಿರುವವರು ಇದೀಗ ಸ್ವತಃ ಅಪಹಾಸ್ಯಕ್ಕೀಡಾಗಿದ್ದಾರೆ. ಏಸುಕ್ರಿಸ್ತ ಮತ್ತು ಪೈಗಂಬರನ ಬಗ್ಗೆ ಕಥೆ ಹೇಳುವ ಪಠ್ಯದಲ್ಲಿ ಬಹುಸಂಖ್ಯಾತ ಮಂದಿ ಆರಾಧಿಸುವ ಶ್ರೀರಾಮ ಮತ್ತು ಶ್ರೀ ಕೃಷ್ಣನ ಬಗ್ಗೆ ಉಲ್ಲೇಖವೇ ಇಲ್ಲ ಎಂದು ಅವರು ಟೀಕಿಸಿದರು.
ಮಳಲಿ ಮಸೀದಿಯಲ್ಲಿ ಹಿಂದೂ ದೇವಾಲಯ ಅವಶೇಷ ಪತ್ತೆ ಬಗ್ಗೆ ಅಲ್ಲಿ ಹಿಂದೂ ಮತ್ತು ಮುಸ್ಲಿಂ ಮುಖಂಡರು ಸೌಹಾರ್ದಯುತವಾಗಿ ಮಾತುಕತೆ ನಡೆಸುತ್ತಿದ್ದಾರೆ. ನಾವು ಎಂದಿಗೂ ಮುಸ್ಲಿಂ ಮತ್ತು ಕ್ರೈಸ್ತರ ವಿರೋಧಿಯಲ್ಲ. ಆದರೆ ಈ ಹಿಂದೆ ಆಕ್ರಮಣಕಾರರು ಮಾಡಿದ ತಪ್ಪು ಸಮರ್ಥನೆ ಮಾತ್ರ ಎಂದಿಗೂ ಸರಿಯಲ್ಲ. ಹಿಂದೂ ವಿಗ್ರಹಾರಾಧನೆಗೆ ಒಂದು ನಿರ್ಧಿಷ್ಟ ಪರಂಪರೆ ಮತ್ತು ಹಿನ್ನೆಲೆ ಇದ್ದು, ಮಳಲಿ ಸೇರಿದಂತೆ ದೇಶದ ವಿವಿಧೆಡೆ ಮಸೀದಿಗಳಲ್ಲಿ ಕಂಡು ಬರುವ ಹಿಂದೂ ದೇವಾಲಯ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.