ಸುಧೇಕ್ಕಾರು: ಶ್ರೀ ರಕ್ತೇಶ್ವರಿ ಮತ್ತು ಪರಿವಾರ ಗುಳಿಗ ದೈವಸ್ಥಾನ ರೂ ೧ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಜೂ.೧ ರಿಂದ ೩ ರತನಕ ಪುನರ್ ಪ್ರತಿಷ್ಠೆ, ‘ಮಹಾ ಕಲಶೋತ್ಸವ’
ಬಂಟ್ವಾಳ: ತಾಲ್ಲೂಕಿನ ಕಲ್ಲಡ್ಕ ಸಮೀಪದ ಸುಧೇಕ್ಕಾರು ಎಂಬಲ್ಲಿ ರೂ ೧ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ರಕ್ತೇಶ್ವರಿ ಮತ್ತು ಪರಿವಾರ ಗುಳಿಗ ದೈವಸ್ಥಾನದಲ್ಲಿ ಸ್ಥಳೀಯ ಮಹಿಳಾ ಭಕ್ತರು ಸೋಮವಾರ ಶ್ರಮದಾನ ನಡೆಸಿದರು.
ಇಲ್ಲಿನ ಮೊಗರ್ನಾಡು ಸಾವಿರ ಸೀಮೆಯ ಬಾಳ್ತಿಲ ಗ್ರಾಮದ ಸುದೆಕ್ಕಾರು ಎಂಬಲ್ಲಿ ರೂ ೧ ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಶ್ರೀ ರಕ್ತೇಶ್ವರಿ ಅಮ್ಮ ಮತ್ತು ಪರಿವಾರ ಗುಳಿಗ ದೈವಸ್ಥಾನದಲ್ಲಿ ಜೂ.೧ ರಿಂದ ೩ ರ ತನಕ ‘ದೈವ ಪ್ರತಿಷ್ಠೆ ಮತ್ತು ಮಹಾಕಲಶೋತ್ಸವ’ವು ಪಳನೀರು ಶ್ರೀಪತಿ ತಂತ್ರಿ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಮತ್ತು ಮಹಾಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ಇಲ್ಲಿನ ದೈವಸ್ಥಾನ ಬಳಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಇಲ್ಲಿಗೆ ಸಮೀಪದ ದೈವಸ್ಥಾನವೊಂದರ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಈ ಪಾಳು ಬಿದ್ದ ದೈವಸ್ಥಾನದ ಕುರುಹು ದೊರೆತಿದೆ ಎಂದರು. ಶತಮಾನದ ಹಿಂದೆ ಆರಾಧಿಸಲ್ಲಟ್ಟು ಬಳಿಕ ಪಾಳು ಬಿದ್ದ ದೈವಸ್ಥಾನದಲ್ಲಿ ಕಲ್ಲಿನ ಅಡಿಪಾಯ ಮತ್ತು ೫೦ ಅಡಿ ಕೆಳಗೆ ಕೆರೆ ಪತ್ತೆಯಾಗಿತ್ತು. ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ ಅವರ ನಿರ್ದೇಶನದಲ್ಲಿ ಮತ್ತೆ ಪುನರ್ ನಿಮಾಣಗೊಂಡಿದೆ ಎಂದರು.
ಹೊರೆಕಾಣಿಕೆ ಮೆರವಣಿಗೆ:
ಜೂನ್ ೧ ರಂದು ಮಧ್ಯಾಹ್ನ ಗಂಟೆ ೨.೩೦ ಕ್ಕೆ ಕಲ್ಲಡ್ಕ ಶ್ರೀ ರಾಮ ಮಂದಿರ ಬಳಿ ಆಕರ್ಷಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಮತ್ತು ಅಂದು ಸಂಜೆ ವಿವಿಧ ಪೂಜಾ ಕಾರ್ಯಕ್ರಮ ಇದೆ.
ಜೂ. ೨ ರಂದು ಬೆಳಿಗ್ಗೆ ೮ ಗಂಟೆಯಿAದ ಗಣಹೋಮ ಮತ್ತಿತರ ಪೂಜೆ ಹಾಗೂ ಸಂಜೆ ಗಂಟೆ ೭ ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜೂ ೩ ರಂದು ಬೆಳಿಗ್ಗೆ ೮ .೧೦ ರ ಮಿಥುನ ಲಗ್ನದಲ್ಲಿ ರಕ್ತೇಶ್ವರಿ ಅಮ್ಮನ ವಿಗ್ರಹ ಮತ್ತು ಮಂಚ ಪ್ರತಿಷ್ಠೆ, ಶ್ರೀ ಗುಳಿಗ ದೈವದ ಪ್ರತಿಷ್ಠೆ, ಪ್ರತಿಷ್ಠಾ ಕಲಶಾಭಿಷೇಕ ಸಹಿತ ಶಿಖರ ಪ್ರತಿಷ್ಠೆ ಮತ್ತು ಪರ್ವ ಸೇವೆ ನಡೆಯಲಿದೆ. ಅಂದು ಬೆಳಿಗ್ಗೆ ೧೧ ಗಂಟೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ವಾಸ್ತುಶಿಲ್ಪಿ ಎಸ್.ಎಂ.ಪ್ರಸಾದ್ ಮುನಿಯಂಗಳ ಸಹಿತ ಹಲವು ಗಣ್ಯರು ಭಾಗವಹಿಸುವರು. ಅಂದು ರಾತ್ರಿ ಗಂಟೆ ೭ರಿಂದ ರಕ್ತೇಶ್ವರಿ ಅಮ್ಮ ನೇಮ ಮತ್ತು ಗುಳಿಗ ದೈವದ ಕೋಲ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಜಯಾನಂದ ಆಚಾರ್ಯ, ಕಂಟಿಕ ಗೋಪಾಲ ಶೆಣೈ, ಪಿ.ಎಸ್.ಮೋಹನ್, ಆರ್. ಚೆನ್ನಪ್ಪ ಕೋಟ್ಯಾನ್, ದಿನೇಶ್ ಅಮ್ಟೂರು, ರಾಮಣ್ಣ ಶೆಟ್ಟಿ, ಮುತ್ತಣ್ಣ ಶೆಟ್ಟಿ, ದಿವಾಕರ ಶೆಟ್ಟಿ, ಕ.ಕೃಷ್ಣಪ್ಪ , ಗಣೇಶ್ ಶೆಟ್ಟಿ ಸುಧೆಕ್ಕಾರ್ ಮತ್ತಿತರರು ಇದ್ದರು.