ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಮನೆ, ಕಚೇರಿ ಮೇಲೆ ಇಡಿ ದಾಳಿ
ಮುಂಬೈ: ಮಹಾರಾಷ್ಟ್ರದ ಸಾರಿಗೆ ಸಚಿವ ಅನಿಲ್ ಪರಬ್ ಅವರ ಮನೆ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಇಂದು ದಾಳಿ ನಡೆಸಿದೆ.
ಅನಿಲ್ ಪರಬ್ ಅವರ ವಿರುದ್ಧ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಏಕಕಾಲಕ್ಕೆ ಪರಬ್ ಅವರ ಬಂಗಲೆ, ಮುಂಬೈ, ರತ್ನಗಿರಿ, ಪುಣೆ ಮತ್ತು ದಾಪೋಲಿಯ ಹೀಗೆ ಅರ್ಧ ಡಜನ್‍ಗೂ ಹೆಚ್ಚು ಸ್ಥಳಗಳಲ್ಲಿ ಶೋಧನೆ ನಡೆಸುತ್ತಿದೆ.
2017 ರಲ್ಲಿ ರತ್ನಗಿರಿ ಜಿಲ್ಲೆಯ ದಾಪೋಲಿಯಲ್ಲಿ ಪರಬ್ ಅವರು 1 ಕೋಟಿ ರೂ.ಗೆ ಭೂಮಿಯನ್ನು ಖರೀದಿಸಿದ್ದರು. ನಂತರ 2019ರಲ್ಲಿ ಅದನ್ನು ನೋಂದಾಯಿಸಲಾಗಿತ್ತು. ನಂತರ 2020ರಲ್ಲಿ ಮುಂಬೈ ಮೂಲದ ಕೇಬಲ್ ಆಪರೇಟರ್ ಸದಾನಂದ್ ಕದಂ ಅವರಿಗೆ 1.10 ಕೋಟಿ ರೂ.ಗೆ ಭೂಮಿಯನ್ನು ಮಾರಾಟ ಮಾಡಲಾಗಿತ್ತು ಮತ್ತು 2017-2020ರ ನಡುವೆ ಆ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲಾಗಿದೆ ಅಂತ ಆರೋಪಿಸಲಾಗಿದೆ. ಅಲ್ಲದೇ 2017ರಲ್ಲಿ ಆರಂಭವಾದ ರೆಸಾರ್ಟ್ ನಿರ್ಮಾಣಕ್ಕೆ 6 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ ಎಂದು ಇಡಿ ತಿಳಿಸಿದೆ.