ಕೈಕಂಬ: ಮಂಗಳೂರು ತಾಲೂಕಿನ ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಸಿದ್ಧ ಮಳಲಿ(ಮಣೆಲ್) ದರ್ಗಾ ಮತ್ತು ಮಸೀದಿಯ ಹಿಂಬದಿಯಲ್ಲಿ ನಿಗೂಢವಾಗಿ ಉಳಿದಿದ್ದ ದೇವಸ್ಥಾನದ ರೂಪದಲ್ಲಿದ್ದ ಗುಡಿ ಪತ್ತೆಯಾಗಿದೆ.
ಇತ್ತೀಚೆಗೆ ಮಳಲಿ ದರ್ಗಾದ ನವೀಕರಣದ ಸಲುವಾಗಿ ದರ್ಗಾವನ್ನು ಜೀರ್ಣೋದ್ಧಾರ ಮಾಡುವ ಸಲುವಾಗಿ ತೆಗೆಯುವ ವೇಳೆ ಹಿಂಬದಿಯಲ್ಲಿ ದೇವಸ್ಥಾನದ ಗುಡಿಯಂತೆ ಕಾಣಸಿಕ್ಕಿದೆ.ಇದುವರೆಗೂ ಹಿಂದೂಗಳಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಹಳೆಯ ದರ್ಗಾ ಕೆಡವಿದಾಗ ಅದರ ಹಿಂದೆ ಅನೇಕ ವರ್ಷಗಳಿಂದ ನಿಗೂಢವಾಗಿ ಉಳಿದಿದ್ದ ಗುಡಿ ಪತ್ತೆಯಾಗಿದೆ. ಕಲಷ, ತೋಮರ, ಕಂಬಗಳು ಇರುವ ದೇಗುಲ ಇದಾಗಿದ್ದು, ಇದರೊಳಗಡೆ ಯಾವ ದೇವರ ಮೂರ್ತಿ ಇದೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ. ಆದರೆ ಮಸೀದಿಯವರು ದೇವಸ್ಥಾನಕ್ಕೆ ಹಾನಿ ಮಾಡದೆ ಸೌಹಾರ್ದತೆ ಮರೆದಿದ್ದಾರೆ.
ಮಳಲಿ ಅಬ್ಬಕ್ಕನ ಊರಾಗಿದ್ದು, ಇಲ್ಲಿ ಅನೇಕ ಜೈನ ಹಾಗೂ ಹಿಂದೂಗಳ ದೇವರ ಕುರುಹುಗಳು ಪತ್ತೆಯಾಗಿದೆ. ಇದಕ್ಕೆ ಮಳಲಿ ದೇವರಗುಡ್ಡೆಯೂ ಒಂದು. ಅದೇ ರೀತಿ ಮಳಲಿಯ ಕುರ್ವೆಮಾರ್ ಫಲ್ಗುಣಿ ಸಮೀಪವೂ ಶಿವಲಿಂಗ ಹಾಗೂ ಪಾಣಿಪೀಠ ಪತ್ತೆಯಾಗಿದೆ. ಆದರೆ ಇದರ ದೇವಸ್ಥಾನ ಎಲ್ಲಿತ್ತು ಎಂದು ತಿಳಿದುಬಂದಿಲ್ಲ. ಪೊಳಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ದೇವಸ್ಥಾನ ಇದಾಗಿರಬಹುದು ಎಂದು ಊರಿನವರ ಅಭಿಪ್ರಾಯ.
