ಮುಂಬಯಿ: ಅಖಂಡ ಭಾರತವನ್ನಾಳಿದ ನಮ್ಮ ರಾಷ್ಟ್ರ ಕಂಡ ಅಸಾಮಾನ್ಯ ಚಕ್ರವರ್ತಿ ಸಾಮ್ರಾಟ್ ಅಶೋಕ. ಅವರ ಸಾಮಾಜಿಕ ಕಳಕಳಿ, ಸಮಾಜ ಸೇವೆ, ಜನೋಪಕಾರ ಇವನ್ನೆಲ್ಲಾ ನೆನಪಿಸಿ ಕೊಡುವ ಒಂದು ಹೊಸ ಪ್ರಯತ್ನ ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಯೂರೀ ಫೌಂಡೇಶನ್ (ರಿ.) ಪ್ರಾಯೋಜಕತ್ವದಲ್ಲಿ ಸಾಮ್ರಾಟ್ ಅಶೋಕ ಜನ್ಮೋತ್ಸವವನ್ನು ಇದೇ ಬರುವ ಎ.೧೪ರಂದು ಗುರುವಾರ ಸಂಜೆ ೪.೦೦ ಗಂಟೆಗೆ ಮಂಗಳೂರು ಮೂಲ್ಕಿ ಇಲ್ಲಿನ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗ ನೇರವೇರಲಿದೆ ಎಂದು ಮಯೂರೀ ಫೌಂಡೇಶನ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಜಯ ಕೆ.ಶೆಟ್ಟಿ ತಿಳಿಸಿದರು.
ಬುಧವಾರ ಮುಂಬಯಿ ಮರೋಳ್ ಇಲ್ಲಿನ ಸಿಲ್ವರ್ ಇನ್ನ್ ಹೊಟೇಲ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜಯ ಶೆಟ್ಟಿ, ಅಂದಿನ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ, ವಿರಾಟ್ ಹಿಂದೂಸ್ಥಾನ್ ಸಂಗಮದ ಅಧ್ಯಕ್ಷ, ರಾಜ್ಯ ಸಭಾ ಸದಸ್ಯ ಡಾ| ಸುಬ್ರಹ್ಮಣ್ಯನ್ ಸ್ವಾಮಿ ಪ್ರಧಾನ ಭಾಷಣಕಾರರಾಗಿ ಆಗಮಿಸಿ ಸಾಮ್ರಾಟ್ ಅಶೋಕ ವಿಷಯದಲ್ಲಿ ಮಾಹಿತಿ ನೀಡಲಿದ್ದಾರೆ. ಅಂತೆಯೇ ನಾಡಿನ ಹಾಗೂ ಮುಂಬಯಿಯ ಅನೇಕ ಧುರೀಣರು ಪಾಲ್ಗೊಳ್ಳುವರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಮನ್ವಯ ಡಾನ್ಸ್ ಕಂಪೆನಿ ಮತ್ತು ಮಹಾಮಾಯಾ ಆರ್ಟ್್ಸ ಫೌಂಡೇಶನ್ ಬೆಂಗಳೂರು ತಂಡವು ವಸುದೈವ ಕುಟುಂಬಕ ನೃತ್ಯ ರೂಪಕ ಪ್ರದರ್ಶನಗೊಳಿಸಲಿದೆ ಎಂದ ಮಯೂರೀ ಜಯಣ್ಣ ತಿಳಿಸಿದರು.
ಜಯರಾಮ ಎ.ಶೆಟ್ಟಿ ಕಡಂದಲೆ ಮಾತನಾಡಿ ಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಎಂದೆಣಿಸಿದ ಸಾಮ್ರಾಟ ಅಶೋಕನು ಪ್ರಾಚೀನ ಭಾರತದಲ್ಲಿ ಅತೀ ದೊಡ್ಡ ರಾಜ್ಯವನ್ನಾಳಿದ ರಾಜ. ಭಾರತದ ಸದ್ಯ ಪಾಟ್ನಾ (ಪಾಟಲೀಪುತ್ರ) ಇಲ್ಲಿ ಜನಿಸಿದ ಅಶೋಕನು ಭಾರತದ ರಾಷ್ಟçಧ್ವಜದಲ್ಲಿ ಉಪಯೋಗಿಸಿದ ಅಶೋಕಚಕ್ರ, ಅಶೋಕ ಸ್ಥಂಭ, ಸ್ಥಂಭದ ಮೇಲಿರುವ ನಾಲ್ಕು ಸಿಂಹಗಳು ಪರಸ್ಪರ ಬೆನ್ನು ಹಾಕಿ ನಿಂತಿರುವ ಪ್ರತಿಮೆ ಆಧುನಿಕ ಭಾರತದ ರಾಜಚಿಹ್ನೆಯೂ ಇಂದಿಗೂ ಬಳಕೆಯಲ್ಲಿದೆ. ಭಾರತದ ರಾಷ್ಟç ಲಾಂಛನವು ಹೊಂದಿರುವ ಸತ್ಯಮೇವ ಜಯತೆ ಅನ್ನುವ ವಾಕ್ಯವೂ ಸತ್ಯವೊಂದೇ ಜಯಗಳಿಸುತ್ತದೆ ಸುಳ್ಳು ಅಲ್ಲ ಅನ್ನುವುದನ್ನು ತಿಳಿಹೇಳಿದ್ದು, ಸತ್ಯದ ಮೂಲಕ ದೈವಿಕ ಮಾರ್ಗವು ಹರಡುತ್ತದೆ ಅನ್ನುವ ರಾಷ್ಟ್ರೀಯ ಧ್ಯೇಯವಾಕ್ಯವೂ ಇಂದಿಗೂ ಬಳಕೆಯಲ್ಲಿದೆ. ಇಂತಹ ಸಾಮ್ರಾಟ ಅಶೋಕರಲ್ಲಿ ಗೌರವ, ಮೌಲ್ಯಗಳನ್ನಿತ್ತು, ಇವರ ರಾಜ್ಯಾಡಳಿತ ಮತ್ತೆ ಮಾದರಿಯಾಗಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿತ್ಯಾನಂದ ಡಿ.ಕೋಟ್ಯಾನ್, ಜಿ.ಟಿ ಆಚಾರ್ಯ, ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ ಉಪಸ್ಥಿತರಿದ್ದರು.
