ಮುಂಬಯಿ : ಮಂಗಳೂರು ಬಜ್ಪೆ ಸನಿಹದ ಪೋರ್ಕೊಡಿ ಇಲ್ಲಿ ಹಿರಿಯ ನಾಗರಿಕರ ಪಾಲಿಗೆ ಸ್ವರ್ಗದ ನೆಲೆಯಾಗಿ ಸೇವಾ ನಿರತ ‘ನಮ್ಮ ಹಿರಿಯರ ಮನೆ’ ವೃದ್ದಾಶ್ರಮದಲ್ಲಿ ಇಂದಿಲ್ಲಿ ಬುಧವಾರ ಮಧ್ಯಾಹ್ನ ವಿ ಆರ್ ವಿಥ್ ಯು (ನಾವು ನಿಮ್ಮೊಂದಿಗಿದ್ದೇವೆ) ತಂಡವು ಭೇಟಿ ನೀಡಿ ತಂಡದ ಪರಿಶ್ರಮ, ಸಹಯೋಗದಿಂದ ಕೊಡಲ್ಪಟ್ಟ ಇನ್ವರ್ಟರ್ ಸೇವೆಗೆ ಚಾಲನೆ ನೀಡಿತು.

ಮಂಗಳೂರು ಕುಲಶೇಖರ ಚೌಕಿ ಇಲ್ಲಿನ ಪ್ರತಿಭ ಸಂಪನ್ನ ಜನಸ್ನೇಹಿ ಅಧಿಕಾರಿ ಗೋಪಾಲ್ ವಿ.ಕುಂದರ್ ಮತ್ತು ಸೈಬರ್ ಸೇಫ್ ಇಂಡಿಯಾ ಇದರ ಸಂಪನ್ಮೂಲವ್ಯಕ್ತಿ, ಕಂಪ್ಯೂಟರ್ ಇಂಜಿನೀಯರಿಂಗ್ ಪ್ರಾಧ್ಯಾಪಕ ಡಾ| ಅನಂತ್ ಪ್ರಭು ಗುರುಪುರ ತಮ್ಮ ತಂಡವನ್ನೊಳಗೊಂಡು ಇನ್ವರ್ಟರ್ ಸೇವೆಗೆ ಚಾಲನೆ ನೀಡಿದರು.

ಉಪಕಾರ ಮನೋಭಾವದ ಒಂದು ಸೇವೆ ಈ ಪ್ರಪಂಚದ ಅಮೂರ್ತ ಅನುತಾಪಕ್ಕೆ ಸಮಾನ ಎನ್ನುವ ಮಾತಿನಂತೆ ಮಾನವತಾವಾದಿ ಗೋಪಾಲ್ ಕುಂದರ್ ಅವರ ಸ್ವಾರ್ಥರಹಿತ ಉದ್ದೇಶ ನಮ್ಮ ಅಳಿಲ ಸೇವೆಗೆ ಪ್ರೇರಣೆ ನೀಡಿದೆ. ಸಮಾನ ವಯಸ್ಕರ ಮತ್ತು ಸಮಾನ ಮನಸ್ಕರ ಮನೋಬಲಕ್ಕೆ ಸೇವಾ ಪ್ರೇರಣೆ ನೀಡಿ ಇಂತಹ ಸೇವೆಗೆ ಅವಕಾಶ ಕಲ್ಪಿಸಿದ್ದು ನಮ್ಮ ಭಾಗ್ಯ ಅಂದುಕೊAಡಿದ್ದೇನೆ ಎಂದು ಅನಂತ್ ಪ್ರಭು ತಿಳಿಸಿದರು.

ನಮ್ಮ ತಂಡದ ಸದಸ್ಯರು ಸೇವಾ ಮನೋಭಾವದ ಹೊಸ ಪಯಣವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿ, ಮಾನವ ಕುಲದ ಸೇವೆಗಾಗಿ ಹೊಸ ಭರವಸೆ, ಸಮರ್ಪಣೆ ಜೊತೆಗೆ ಯಾವುದಕ್ಕೂ ಅಂಜದೆ ಈ ಪಯಣವನ್ನು ಮುಂದುವರಿಸಲು ಒಗ್ಗೂಡಿದೆ. ವಿಶೇಷವಾಗಿ ಹಿರಿಯ ನಾಗರಿಕರ ಸೇವೆಯಲ್ಲಿ ತೊಡಗಿಸಿ ಕೊಳ್ಳಲು ತಮ್ಮವರಿಂದಲೇ ನಿರ್ಲಕ್ಷ್ಯಕ್ಕೊಳಪಟ್ಟಿರುವ ಮತ್ತು ತ್ಯಜಿಲ್ಪಟ್ಟಿರುವ ಹಿರಿಯ ನಾಗರಿಕರು ತಮ್ಮ ಬದುಕಿನ ಕೊನೆಯ ದಿನಗಳನ್ನು ಶಾಂತಿ ಮತ್ತು ಪ್ರಶಾಂತತೆಯಿಂದ ಕಳೆಯಲು ನಮ್ಮಿಂದಾಗುವ ಸೇವೆಗೆ ಕೈಜೋಡಿಸಿದ್ದೇವೆ. ಕನಿಷ್ಠ ಮಾನವ ಘನತೆಯೊಂದಿಗೆ ಪ್ರಶಾಂತತೆಯ ಬದುಕು ರೂಪಿಸುವ ಹಿರಿಯ ನಾಗರಿಕ ಜೀವಗಳಿಗೊಂದು ನೆಮ್ಮದಿಯ ತಾಣವಾಗಿರುವ `ನಮ್ಮ ಹಿರಿಯರ ಮನೆ’ಗೆ ಹಿರಿಯರ ನೆಮ್ಮದಿಯ ಬಾಳಸಂಜೆಗೊಂದು ಕ್ಕಿಂಚಿತ್ತು ವರದಾನ ನೀಡಿದ್ದೇವೆಯಷ್ಟೇ ಗೋಪಾಲ್ ಕುಂದರ್ ಎಂದರು.

ಸುಮಾರು ಅರ್ಧ ಲಕ್ಷ ಮೌಲ್ಯದ ಇನ್ವರ್ಟರ್ ಕೊಡಮಾಡಿದ್ದು ಈ ಸಂದರ್ಭದಲ್ಲಿ ತಂಡದ ಕೊಲ್ಲಾಡಿ ಬಾಲಕೃಷ್ಣ ರೈ, ಕೀರ್ತನ್ ದೇವಾಡಿಗ, ರಾಜೇಶ್ ಕದ್ರಿ, ಶ್ರೀಜೆ ಬಂಗೇರ, ಹರೀಶ್ ಪೈ, ಸುಧಾಕರ್ ಕಾಮತ್, ಶ್ಯಾಮ್ ಪ್ರಸಾದ್, ಅನುದೀಪ್ ಮತ್ತಿತರರು ಉಪಸ್ಥಿತರಿದ್ದು ಹಿರಿಯ ನಾಗರಿಕರೊಡನೆ ಉಟೋಪಚಾರಗೈದು ವೃದ್ದ ಜೀವಗಳಿಗೆೆ ನಾವು ನಿಮ್ಮೊಂದಿಗಿದ್ದೇವೆ ಎಂದು ಶಕ್ತಿ ತುಂಬಿದರು.

