ಮುಂಬಯಿ: ಪರಿವರ್ತನಾ ಕಾಲಕ್ಕೆ ಅನುಗುಣವಾಗಿ ಯುವಜನಾಂಗ ಉದ್ಯಮದತ್ತ ಆಸಕ್ತಿ ಹೊಂದುವ ಅಗತ್ಯವಿದೆ. ವೃತ್ತಿಯಲ್ಲಿ ವಿಶ್ವಾಸ್ಥರಾಗಿ ಸೇವಾ ನಿರತರಾದಗಲೇ ಉದ್ಯಮದ ಯಶಸ್ಸು ಸಾಧ್ಯ. ಉದ್ಯಮವನ್ನು ಸ್ಪರ್ಧೆಯಾಗಿಸದೆ ಸೇವಾಧರ್ಮವಾಗಿಸಿ ಕಾರ್ಯನಿರತರಾದಗಲೇ ಗ್ರಾಹಕರನ್ನು ಆಸ್ತಿಯಾಗಿಸಲು ಸಾಧ್ಯ. ಕೊರೋನಾ, ಯುಕ್ರೇನ್ ಯುದ್ಧದ ಅಲಸ್ಯದಿಂದ ಹೊರ ಬಂದು ಮತ್ತೆ ಯಶಸ್ಸಿನ ಸಾಧನೆಯತ್ತ ಯೋಚಿಸಿರಿ. ಆವಾಗಲೇ ತಾವು ಯಶಸ್ವಿ ಉದ್ಯೋಗಿಗಳಾಗಿ ಮುಂದೊಂದು ದಿನ ಸಾಧಕ ಸ್ವಉದ್ಯಮಿಗಳಾಗುವಿರಿ ಎಂದು ಮುಂಬಯಿಯಲ್ಲಿನ ಹೆಸರಾಂತ ವಾಗ್ಮಿ, ಸಂಪನ್ಮೂಲ ವ್ಯಕ್ತಿ, ಸಾಯಿ ಇಂಡಸ್ಟ್ರಿಯಲ್ ಅಲೈಯನ್ಸಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ವಿನೋದ್ ಛೋಪ್ರಾ ತಿಳಿಸಿದರು.

ಮಾ.28ರಂದು ಸೋಮವಾರ ಅಂಧೇರಿ ಪಶ್ಚಿಮದ ಲಕ್ಷ್ಮೀ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿನ ಶಿವಾ’ಸ್ ಅಕಾಡೆಮಿ ಸಭಾಗೃಹದಲ್ಲಿ ಹೇರ್ ಡಿಝೈರ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೆ.ಭಂಡಾರಿ

ಆಯೋಜಿಸಿದ್ದ ಮಾಹಿತಿ ಕಾರ್ಯಗಾರವನ್ನುದ್ದೇಶಿಸಿ ವಿನೋದ್ ಛೋಪ್ರಾ ಮಾತನಾಡಿ ಅಪತ್ಕಾಲದಿಂದ ಯಾವುದೇ ಉದ್ಯಮಗಳು ಹಿಂದುಳಿಯದು. ಬದಲಾಗಿ ಕ್ರಮೇಣ ಶೀಘ್ರಗತಿಯಲ್ಲಿ ಉದ್ಯಮ ಮುನ್ನಡೆಯುವು ದು. ಆದ್ದರಿಂದ ಸದ್ಯದ ಸಂಧಿಗ್ಧ ಕಾಲದಬಗ್ಗೆ ಚಿಂತಿಸದೆ ಭವಿಷ್ಯತ್ಕಾಲದ ಬಗ್ಗೆ ಯೋಚಿಸಿ ಮುನ್ನಡೆಯುವಂತೆ ಸಲಹಿಸಿದರು.

ಶಿವರಾಮ ಭಂಡಾರಿ ಮಾತನಾಡಿ ಪ್ರಸ್ತುತ ಕೂದಲು ಅನ್ನುವುದು ವಜ್ರ, ಮುತ್ತು ಚಿನ್ನಕ್ಕಿಂತಲೂ ದುಬಾರಿ ಬೆಲೆಬಾಳುವಂತಹದ್ದು. ಕೂದಲಿನ ಕ್ಷೀಣತೆಯಿಂದ ಖಿನ್ನತೆಗೆ ಒಳಗಾದವರ ವ್ಯಥೆ ಬಗ್ಗೆ ಕೇಶವೃತ್ತಿಗರು ಚಿಂತಿಸಬೇಕು. ಕೂದಲು ಇಲ್ಲದವರಿಗೆ ಮಾತ್ರ ಇದರ ಮೌಲ್ಯ ತಿಳಿಯುವುದು. ಜನರ ಮುಖ ಸೌಂದರ್ಯ, ತ್ವಚೆಯ ಕಾಳಜಿ ನಮ್ಮ ಕರ್ತವ್ಯವಾಗಿಸುವ ಅಗತ್ಯವಿದೆ. ಈ ಎಲ್ಲ ವಿಚಾರಗಳನ್ನು ಗಮನಿಸಿ ಶಿವಾಸ್ ಡ್ರೀಮ್ ಟೀಮ್ ರೂಪಿಸುವ ಕನಸು ಕಂಡಿದ್ದು ಎಲ್ಲರ ಸಹಯೋಗ ಅಗತ್ಯವಿದೆ ಎಂದರು.

ಸುಮಾರು ಆರು ಸಾವಿರಕ್ಕೂ ಅಧಿಕ ಮಕ್ಕಳಿಗೆ ಕೇಶವೃತ್ತಿಯ ವೃತ್ತಿಪರ ತರಬೇತಿ ನೀಡಿ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಸುಶಿಕ್ಷಿತರನ್ನಾಗಿಸಿ ಸ್ವೌದ್ಯಮಿಗಳಾಗಿಸಿದ ಅನುಪಮ ಸಾಧನೆಗಾಗಿ ಶಿವಾ’ಸ್ ಅಕಾಡೆಮಿಗೆ ಭಾರತ ಸರಕಾರದ ಅಲ್ಪಸಂಖ್ಯಾತ ಖಾತೆಯ ಮಾಜಿ ಸಚಿವೆ ಡಾ| ನಜ್ಮಾ ಎ.ಹೆಪ್ತುಲ್ಲಾ, ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಕೌಶಲ್ಯ ತರಬೇತಿ ಪ್ರಮಾಣಪತ್ರ ಪ್ರದಾನಿಸಿ ಗೌರವಿಸಿದ್ದೇ ಈ ಸಂಸ್ಥೆಯ ಹೆಗ್ಗಳಿಕೆ ಎಂದೂ ಛೋಪ್ರಾ ಶಿವಾ’ಸ್ ಅಕಾಡೆಮಿಯ ಸೇವಾ ವೈಖರ್ಯತೆಯನ್ನು ಪ್ರಶಂಸಿಸಿ ಅಭಿನಂದಿಸಿ ಶಿವಾಸ್ ಪರಿವಾರದ ಸಾಧಕರಾದ ಶ್ವೇತಾ ಆರ್.ಭಂಡಾರಿ, ಮೊಹ್ಮದ್ ಇಲಿಯಾಸ್, ರಿತೇಶ್ ಚೌವ್ಹಣ್, ಮಮತಾ ಜೈಸ್ವಾಲ್, ಸವಿತಾ ಆರ್.ಭಂಡಾರಿ ಇವರನ್ನು ಗೌರವಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಶಿವಾಸ್ ಪರಿವಾರದ ಅನುಶ್ರೀ ಶಿವರಾಮ ಭಂಡಾರಿ (ನಿರ್ದೇಶಕಿ), ಸಿಎ| ನವೀನ್ ಜೋಶಿ, ರವಿ ಭಂಡಾರಿ, ಅಭಿಷೇಕ್ ಭಂಡಾರಿ, ಮಂಜುನಾಥ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದು ಮೆಲಿಸ್ಸಾ ಡಿಕೋಸ್ಟಾ ಸ್ವಾಗತಿಸಿದರು. ರಾಘವ ವಿ.ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಮೊಹ್ಮದ್ ಇಲಿಯಾಸ್ ವಂದಿಸಿದರು. 
