ಕೈಕಂಬ : ವಾಮಂಜೂರು ಮಂಗಳಜ್ಯೋತಿ ಹತ್ತಿರದಲ್ಲಿರುವ ರೈಮಂಡ್ಸ್ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ೧೨ನೇ ತರಗತಿಯ ಸಪ್ಲಿಮೆಂಟರಿ ಪರೀಕ್ಷೆ ಬರೆಯಲು ಮುಂದಾದ ೧೮ ವಿದ್ಯಾರ್ಥಿನಿಯರಿಗೆ ಶಾಲಾ ಆಡಳಿತ ಆಕ್ಷೇಪಿಸಿದಾಗ ವಿದ್ಯಾರ್ಥಿಗಳು ಕ್ಷಿಪ್ರಗತಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ಹಿಜಾಬ್ ಹಾಕಿಕೊಂಡೇ ತರಗತಿಗೆ ಹಾಜರಾಗಿದ್ದು, ಈಗ ಹಿಜಾಬ್ ಧರಿಸಿಕೊಂಡೇ ಪರೀಕ್ಷೆ ಬರೆಯುತ್ತೇವೆ ಎಂದು ಸುಮಾರು ೧೮ ಮುಸ್ಲಿಂ ವಿದ್ಯಾರ್ಥಿನಿಯರು ಸೋಮವಾರ ಕಾಲೇಜು ಉಪನ್ಯಾಸಕರಲ್ಲಿ ವಾದಕ್ಕಿಳಿದರು. ಪ್ರಸಕ್ತ ಸರ್ಕಾರದ ಆದೇಶವಿರುವುದರಿಂದ ಹಿಜಾಬ್ ಧರಿಸಿಕೊಂಡು ತರಗತಿಗೆ ಹಾಜರಾಗುವಂತಿಲ್ಲ. ಹಿಜಾಬ್ ಕಳಚಿ ತರಗತಿ ಕೊಠಡಿಯೊಳಗೆ ತೆರಳಿದರೆ ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ ಎಂದು ಕಾಲೇಜು ಪ್ರಾಂಶುಪಾಲರು ಸ್ಪಷ್ಟಪಡಿಸಿದರು.
ಅಚ್ಚರಿಯ ಸಂಗತಿಯೆಂದರೆ, ಹಿಜಾಬ್ ಧರಿಸಿಕೊಂಡಿದ್ದ ೧೮ ವಿದ್ಯಾರ್ಥಿನಿಯರಿಗೆ ಕಾಲೇಜಿನ ೨೭ ಮುಸ್ಲಿಂ ವಿದ್ಯಾರ್ಥಿಗಳು ಬೆಂಬಲ ಸೂಚಿಸಿ, ತಾವು ಪರೀಕ್ಷೆ ಬಹಿಷ್ಕರಿಸಿ ಹೊರ ನಡೆದಿದ್ದಾರೆ.
ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿದಾಗ ಕಾಲೇಜು ಪ್ರಾಂಶುಪಾಲರು ಕಂಕನಾಡಿ ಗ್ರಾಮಾಂತರ(ವಾಮಂಜೂರು) ಪೊಲೀಸ್ ಠಾಣೆಗೆ ದೂರು ನೀಡಿದರು. ಸ್ಥಳಕ್ಕಾಗಮಿಸಿದ ಎಸ್‌ಐ ಜಾನ್ಸನ್ ಡಿ’ಸೋಜ ನೇತೃತ್ವದ ಪೊಲೀಸ್ ತಂಡ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ಬಳಿಕ ಪ್ರಾಂಶುಪಾಲರು ಕಾಲೇಜಿಗೆ ಆಗಮಿಸಿದ ಕೆಲವು ವಿದ್ಯಾರ್ಥಿನಿಯರ ಪೋಷಕರೊಂದಿಗೆ ವಿಫಲ ಮಾತುಕತೆ ನಡೆಸಿದರು. ಈ ವೇಳೆ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಬೆಂಬಲ ಸೂಚಿಸಿ ಕಾಲೇಜ್ ಗೇಟ್ ಬಳಿ ಜಮಾಯಿಸಿದ ಮುಸ್ಲಿಂ ಯುವಕರನ್ನು ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಸ್ಥಳದಿಂದ ತೆರಳುವಂತೆ ಪೊಲೀಸರು ಸೂಚಿಸಿದರು.
