ಕೈಕಂಬ : ಇತರ ಕೆಲವು ದೊಡ್ಡ ಪಂಚಾಯತ್‌ಗಳಿಗೆ ಹೋಲಿಸಿದರೆ ಉಳಾಯಿಬೆಟ್ಟು ಪಂಚಾಯತ್ ಸದಸ್ಯರ ಸಂಖ್ಯೆ ಕಡಿಮೆ ಇದ್ದರೂ, ಇಲ್ಲಿನ ಕ್ರಿಯಾಶೀಲ ಸದಸ್ಯರು ಮತ್ತು ಪಕ್ಷ ಕಾರ್ಯಕರ್ತರ ಶ್ರಮದಿಂದ ಗ್ರಾಮವು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಸರ್ಕಾರಿ ಅನುದಾನ ಸದ್ಬಳಕೆಯಾಗುತ್ತಲೇ, ಪಂಚಾಯತ್ ಮೇಲೆ ಗ್ರಾಮಸ್ಥರ ವಿಶ್ವಾಸ ಹೆಚ್ಚಾಗುತ್ತಿದೆ ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಜಪ್ಪುವಿನಲ್ಲಿ ಸ್ಥಾಪಿಸಲಾದ ನೂತನ ಘನತ್ಯಾಜ್ಯ ಘಟಕ ಹಾಗೂ ಕಾಂತರಬೆಟ್ಟುವಿನಲ್ಲಿ ನಿರ್ಮಿಸಲಾದ ಹೊಸ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಬಳಿಕ, ಪಂಚಾಯತ್ ಸಭಾಭವನದಲ್ಲಿ ಆಯೋಜಿಸಲಾದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿ, ಗ್ರಾಮಗಳಿಂದ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಒಳರಸ್ತೆಗಳ ಅಭಿವೃದ್ಧಿಗೆ ಪಂಚಾಯತ್ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಛತೆ ಹಾಗೂ ಅಭಿವೃದ್ಧಿ ಕೆಲಸಕಾರ್ಯಳಿಗೆ ಗ್ರಾಮದ ಪ್ರತಿಯೊಬ್ಬ ನಾಗರಿಕರ ಸಹಕಾರ ಅತ್ಯಗತ್ಯ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು ಮಾತನಾಡಿ, ಶಾಸಕರ ಇಚ್ಛಾಶಕ್ತಿಯಿಂದ ಲಭಿಸಿರುವ ಕೋಟ್ಯಂತರ ರೂಪಾಯಿ ಅನುದಾನದಿಂದ ಉಳಾಯಿಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ತುರ್ತು ಪರಿಹಾರ, ಸಂಘ-ಸಂಸ್ಥೆಗಳಿಗೆ ನೆರವಿನಂತಹ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಇನ್ನು ಕೆಲವು ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಜಲ್ ಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿಯೊಬ್ಬರಿಗೂ ಶೀಘ್ರ ಕುಡಿಯುವ ನೀರು ಲಭಿಸಲಿದೆ ಎಂದರು.
ಈ ಸಂದರ್ಭದಲ್ಲಿ ಶೇ. ೨೫ರ ಯೋಜನೆಯಲ್ಲಿ ಎಸ್‌ಟಿ/ಎಸ್‌ಟಿಯವರಿಗೆ ಹಾಗೂ ಶೇ. ೫ರ ಯೋಜನೆಯಡಿ ವಿಕಲಚೇತನರಿಗೆ ನೆರವಿನ ಚೆಕ್ ವಿತರಿಸಲಾಯಿತು.
ಉಪಾಧ್ಯಕ್ಷೆ ರತ್ನಾ, ಸಿಡಿಪಿ ಮಂಗಳೂರು ಗ್ರಾಮಾಂತರ ಯೋಜನಾಧಿಕಾರಿ ಶೈಲಾ ಕಾರಿಗಿ, ಪಂಚಾಯತ್ ಸದಸ್ಯರಾದ ವಿಶ್ವನಾಥ ಶೆಟ್ಟಿ, ದಿನೇಶ್ ಕುಮಾರ್ ಮತ್ತು ಮಮತಾ, ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೆ, ಮಾಜಿ ಸದಸ್ಯ ವೆಂಕಪ್ಪ ಪೂಜಾರಿ, ಪೆರ್ಮಂಕಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನಿರ್ದೇಶಕಿ ಸುಭದ್ರಾ ರಾವ್, ಅಹ್ಮದ್ ಕೋಯ, ಪಂಚಾಯತ್ ಸಿಬ್ಬಂದಿ ವರ್ಗ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ಥಳೀಯ ಗಣ್ಯರು, ಪಕ್ಷ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಪಿಡಿಒ ಅನಿತಾ ಕ್ಯಾಥರಿನ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ರಾಮಪ್ಪ ವಂದಿಸಿದರು.
