ಕೈಕಂಬ : ಕುಪ್ಪೆಪದವು ಗ್ರಾಮ ಪಂಚಾಯತ್‌ನಲ್ಲಿ ಸೋಮವಾರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಪುಸ್ತಕ ಗೂಡು ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ, ‘ಸ್ವಚ್ಛತಾ ಬಿತ್ತಿಪತ್ರ’ಗಳ ಅನಾವರಣಗೊಳಿಸಿದರು.
ಉದ್ಘಾಟನೆ ಬಳಿಕ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ನಮ್ಮ ಜೀವನ ಪದ್ಧತಿ ‘ಅಪ್ ಟು ಡೇಟ್’ ಮಾಡಿಕೊಳ್ಳುವ ದೆಸೆಯಲ್ಲಿ ಡಿಜಿಟಲ್ ಮಾಧ್ಯಮ ನೆರವಾಗಲಿದೆ. ಓದುವ ಹವ್ಯಾಸ ರೂಢಿಸಿಕೊಂಡಲ್ಲಿ, ಸುತ್ತಲ ಪ್ರಪಂಚದ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಬಹುದು. ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪಂಚಾಯತ್ ಕೈಗೊಳ್ಳುವ ಕೆಲಸಗಳಿಗೆ ಗ್ರಾಮಸ್ಥರ ಸಹಕಾರ ಅತ್ಯವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯತ್ ಅಧ್ಯಕ್ಷ ಡಿ ಪಿ ಹಮ್ಮಬ್ಬ ಮಾತನಾಡಿ, ಪಂಚಾಯತ್‌ನ ಕಾರ್ಯಕ್ರಮಗಳಿಗೆ ನೆರವು ನೀಡಿರುವ ದಾನಿಗಳ ಬಗ್ಗೆ ಸ್ಮರಿಸಿಕೊಳ್ಳುತ್ತ, ಪಂಚಾಯತ್‌ನೊಂದಿಗೆ ಗ್ರಾಮಸ್ಥರು ಕೈಜೋಡಿಸಿದರೆ ಗ್ರಾಮದ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿದೆ. ಈ ನಿಟ್ಟಿನಲ್ಲಿ ಕುಪ್ಪೆಪದವು ಪಂಚಾಯತ್ ಈಗಾಗಲೇ ಜಿಲ್ಲೆಯಲ್ಲೇ ೨ನೇ ಸ್ಥಾನ ಪಡೆದುಕೊಂಡಿದೆ ಎಂದರು.
ಪಂಚಾಯತ್‌ನ ಕಾರ್ಯಕ್ರಮಕ್ಕೆ ಸಹಕರಿಸಿದ ಅನಂತ ಕೇಸರಿ ಕಟ್ಟೆಮಾರ್, ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದ ಮ್ಯಾನೆಜಿಂಗ್ ಟ್ರಸ್ಟಿ ಪ್ರವೀಣ್ ಕುಮಾರ್ ಅಗರಿ, ಬಸ್ ಮಾಲಕ ನಾರಾಯಣ ಪಿ ಎಂ, ಅಜಿತ್ ಕುಮಾರ್ ಜೈನ್ ಸಹಿತ ೯ ಮಂದಿಯನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ವಿಮಲಾ, ಸದಸ್ಯರಾದ ನಿತೇಶ್, ಪುಷ್ಪಾ, ಮಂಜುಳಾ, ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ಗಾಯತ್ರಿ, ಸಿಬ್ಬಂದಿ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಪಿಡಿಒ ಸವಿತಾ ಮಂದೋಲಿಕರ್ ಸ್ವಾಗತಿಸಿದರೆ, ಕಾರ್ಯದರ್ಶಿ ಇಸ್ಮಾಯಿಲ್ ಎಂ ಎಸ್ ಕಾರ್ಯಕ್ರಮ ನಿರೂಪಿಸಿದರು.

