ಮೂಡುಬಿದಿರೆ: ಇಲ್ಲಿನ ಜ್ಯುವೆಲ್ಲರಿ ಅಂಗಡಿಯೊಂದರಿಂದ ಅಭರಣ ತಯಾರಿ ಹಾಗೂ ದುರಸ್ತಿಗೆ ಬಂಗಾರವನ್ನು ಕೊಂಡು ಹೋದಾತ, ಅದನ್ನು ವಾಪಸು ನೀಡದೆ.ತಲೆಮರಿಸಿಕೊಂಡಿದ್ದಾನೆ. ಜ್ಯುವೆಲ್ಲರಿಯವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಮೂಡುಬಿದಿರೆಯ ಕಮಲ್ ಜ್ಯುವೆಲರ್ಸ್ ಕಳೆದ ಒಂದು ವರ್ಷಗಳಿಂದ ಬಂಗಾರ ಪಡೆದು ಕೆಲಸವನ್ನು ಮಾಡಿಕೊಡುತ್ತಿದ್ದ ಪಡುಮಾರ್ನಾಡು ಗ್ರಾಮದ ಕೊಪ್ಪಳ ದರ್ಖಾಸು ಮನೆ ನಿವಾಸಿ ಪ್ರವೀಣ್ ಆಚಾರ್ಯ ಎಂಬಾತ ಕೆಲವು ದಿನಗಳ ಹಿಂದೆ 33.5 ಗ್ರಾಂ ಬಂಗಾರವನ್ನು ಅಭರಣ ತಯಾರಿಸಲು ಹಾಗೂ ದುರಸ್ತಿಗಾಗಿ ಕೊಂಡುಹೋಗಿದ್ದು, ಅದನ್ನು ಹಿಂದಿರುಗಿಸದಿರುವುದರಿಂದ ಜ್ಯುವೆಲ್ಸ್ನ ಮಾಲಕ ಸುದರ್ಶನ್ ಅವರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಇದೇ ರೀತಿಯಲ್ಲಿ ವಿವಿಧ ಜ್ಯುವೆಲ್ಲರಿಗಳಲ್ಲಿ ಆರೋಪಿಯು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
