ಕೈಕಂಬ : ಉಡುಪಿ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಮರಳು ಸಾಗಾಟದ ವಾಹನಗಳು ಮತ್ತು ಮರಳು ತೆರವುಗೊಳಿಸುವ ದೋಣಿಗಳಿಗೆ ಜಿಪಿಎಸ್(ಗ್ಲೋಬಲ್ ಪೊಜಿಶನಿಂಗ್ ಸಿಸ್ಟಂ) ಅಳವಡಿಸಿ ವಾಹನಗಳು ಮತ್ತು ದೋಣಿಗಳ ಚಲನವಲನ ಪತ್ತೆ ಹಾಗೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹೇರುವ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಇದು ಹೆಚ್ಚು ಪರಿಣಾಮಕಾರಿಯಾಗಿದೆ.Mini-Magnetic-GPS-Tracker-GF07-with-Microphone-10032021-01-p

ಈ ತಂತ್ರಜ್ಞಾನದ ಮೂಲಕ ತಾತ್ಕಾಲಿಕ ಪರವಾನಿಗೆ ಹೊಂದಿರುವವರು ನಿರ್ದಿಷ್ಟ ಸ್ಥಳ ಹೊರತುಪಡಿಸಿ ಬೇರೆ ಜಾಗದಲ್ಲಿ ಮರಳು ತೆಗೆದರೆ ಅಥವಾ ಮರಳು ಸಾಗಾಟ ವಾಹನವು ನಿರ್ದಿಷ್ಟ ಸ್ಥಳಕ್ಕೆ ಬಿಟ್ಟು ಬೇರೆಡೆ ಹೋಗಿದ್ದರೆ ಆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿದೆ. ಇದಲ್ಲದೆ, ಗ್ರಾಹಕರು ಮರಳು ವಿತರಣೆಯಲ್ಲಿ ನೋಂದಾಯಿತ ಮರಳು ಸಾಗಾಣಿಕೆ ವಾಹನ/ಲಾರಿ/ಟೆಂಪೋಗಳಿಗೆ ಜಿಪಿಎಸ್ ಅಳವಡಿಸಿ ಮರಳು ವ್ಯವಹಾರದ ದಕ್ಕೆಯಿಂದಲೇ(ಸ್ಟಾಕ್ ಯಾರ್ಡ್) ಮರಳು ವಿತರಿಸಲು ಬುಕ್ಕಿಂಗ್ ಮಾಡಿಕೊಳ್ಳುವುದು ಜಿಪಿಎಸ್ ತಂತ್ರಜ್ಞಾನದ ಮತ್ತೊಂದು ಭಾಗವಾಗಿದೆ.

ಮರಳು ಬುಕ್ ಆದ ಬಳಿಕ ಮರಳು ಯಾರ್ಡ್ಗೆ ವಾಹನ ಹೊರಟಿದೆಯೇ ಇಲ್ಲವೇ ಅಥವಾ ಯಾರ್ಡ್ನಿಂದ ಗ್ರಾಹಕರಿಗೆ ಮರಳು ಹೋಗುತ್ತಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಂಡು, ಮರಳು ತಲುಪಿಸಿದ ಬಗ್ಗೆ ಒಟಿಪಿ ಮೂಲಕ ದೃಢಪಡಿಸಿಕೊಳ್ಳಲು ಜಿಪಿಎಸ್ ತಂತ್ರಜ್ಞಾನ ಮಹತ್ವದ್ದಾಗಿದೆ.

ಉಡುಪಿ ಜಿಲ್ಲಾಡಳಿತವು ಈಗಾಗಲೇ ಈ ತಂತ್ರಜ್ಞಾನದ ಪ್ರಯೋಜನ ಪಡೆದುಕೊಂಡು ಮರಳು ವಿತರಣೆ, ಮರಳು ಸಾಗಾಣಿಕೆ, ಮರಳು ಗಣಿಗಾರಿಕೆ/ಮರಳು ತೆರವು ಕಾರ್ಯದಲ್ಲಿ ಪಾರದರ್ಶಕತೆಗೆ ಮುಂದಾಗಿದೆ. ಈ ಮೂಲಕ ಅಕ್ರಮ ಮರಳುಗಾರಿಕೆಗೆ ಕಡಿವಾಣ ಸಾಧ್ಯವಾಗುತ್ತಿದ್ದು, ಇದು ರಾಜ್ಯದ ಅಭಿವೃದ್ಧಿಗೆ ನೆರವಾಗುತ್ತಿದೆ ಎಂದು ಉಡುಪಿ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಜಿಪಿಎಸ್ ಕಾರ್ಯನಿರ್ವಹಣೆ :ಮೊಬೈಲ್ ಆಂಡ್ರೈಯ್ಡ್ ಫೋನ್‌ನಲ್ಲಿ ೨ಜಿಯಿಂದ ೫ಜಿವರೆಗೆ ಅಭಿವೃದ್ಧಿಯಾಗುತ್ತಿರುವಂತೆ, ಜಿಪಿಎಸ್ ತಂತ್ರಜ್ಞಾನ ವಿಶಿಷ್ಟ ವಲಯಗಳಲ್ಲಿ ಅಕ್ರಮ-ಸಕ್ರಮ ದೃಢಪಡಿಸುವಲ್ಲಿ ಬಳಕೆಯಾಗುತ್ತಿದೆ. ರಾಜ್ಯದ ವಿಭಿನ್ನ ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ(ಗಣಿಗಾರಿಕೆ) ನಡೆಯುತ್ತಿರುವ ಸ್ಪಷ್ಟ ಮಾಹಿತಿಯನ್ವಯ, ಇದರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಿಪಿಎಸ್ ಮೊರೆ ಹೋಗಿದೆ. ಈ ನಿಟ್ಟಿನಲ್ಲಿ ರಾಜ್ಯದ ವಿಭಿನ್ನ ಸಾರಿಗೆ ವಲಯದಲ್ಲಿ ನಡೆಯುವ ಅಕ್ರಮ ವ್ಯವಹಾರ ತಡೆಯಲು ವ್ಯಾಪಕವಾಗಿ ಬಳಕೆಯಾಗುತ್ತಿದೆ. ಆರಂಭದಲ್ಲಿ ಜಿಪಿಎಸ್ ತಿರುಚುವ ಕೆಲಸಗಳು ನಡೆದಿದ್ದು, ಇದೀಗ ಇಂತಹ ಅಕ್ರಮಗಳಿಗೂ ತಡೆ ಹೇರುವ ನಿಟ್ಟಿನಲ್ಲಿ ಆತ್ಯಾಧುನಿಕ ಜಿಪಿಎಸ್ ಉಪಕರಣ ಸಿದ್ಧಪಡಿಸಲಾಗಿದೆ.

ಜಿಪಿಎಸ್ ಬಳಕೆಯು ನಾವು ಇರುವ ಪೊಜಿಶನ್ ಅಥವಾ ಮ್ಯಾಪ್/ನಕ್ಷೆಯಲ್ಲಿ ಗುರುತಿಸುವಿಕೆಯಾಗಿದ್ದು, ಅಕ್ಷಾಂಶ, ರೇಖಾಂಶದಿಂದ ಗುರುತಿಸುವುದು. ಅಕ್ಷಾಂಶವು(ಲ್ಯಾಟಿಟ್ಯೂಡ್) ಎನ್ನುವುದು ನಕ್ಷೆಯಲ್ಲಿ ಅಥವಾ ಭೂಮಿಯಲ್ಲಿ ದಕ್ಷಿಣದಿಂದ ಉತ್ತರಕ್ಕೆ ಅಳತೆ ಮಾಡುವುದು ಮತ್ತು ರೇಖಾಂಶವು(ಲಾಜಿಟ್ಯೂಡ್) ಎನ್ನುವುದು ಪೂರ್ವದಿಂದï ಪಶ್ಚಿಮಕ್ಕೆ ಅಳತೆ ಮಾಡುವುದು. ಇದೇ ತಂತ್ರಾಂಶ ಬಳಸಿ ಓಲಾ ಮತ್ತತು ಉಬರ್ ಕಂಪೆನಿಗಳು ಬೆಂಗಳೂರು ನಗರದಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಜಿಪಿಎಸ್ ಮೊಬೈಲ್‌ನಲ್ಲಿ ನಮೂದಿಸಿದಲ್ಲಿ ಗ್ರಾಹಕರಿರುವ ಸ್ಥಳ ಚಾಲಕರಿಗೆ ಹಾಗೂ ವಾಹನ ಚಾಲಕನಿರುವ ಸ್ಥಳ ಗ್ರಾಹಕರಿಗೆ ಸುಲಭವಾಗಿ ತಿಳಿಯುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಕ್ರಮ ಮರಳುಗಾರಿಕೆ ತಡೆಯಲು ವಾಹನಗಳಿಗೆ ಜಿಪಿಎಸ್ ಅಳವಡಿಸಿದ್ದರೂ, ಅವುಗಳ ಪ್ರಯೋಗ ಅಷ್ಟಕ್ಕಷ್ಟೇ ಇದೆ. ಜಿಲ್ಲೆಯ ನಾನ್‌ಸಿಆರ್‌ಝಡ್ ನದಿ ಭಾಗದಿಂದ ಟೆಂಡರ್ ಇಲ್ಲದೆಯೇ ಅತ್ಯಧಿಕ ಮರಳುಗಾರಿಕೆ ನಡೆಯುತ್ತದೆ ! ಆದರೆ ನೆರೆಯ ಜಿಲ್ಲೆಯಲ್ಲಿ(ಉಡುಪಿ) ಜಿಪಿಎಸ್ ಹೆಚ್ಚು ಪರಿಣಾಮಕಾರಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

By suddi9

Leave a Reply

Your email address will not be published. Required fields are marked *