ಕೈಕಂಬ : ಸುಮಾರು ಮೂರು ಎಕ್ರೆ ವಿಶಾಲ ಜಾಗದಲ್ಲಿ ನಿರ್ಮಾಣಗೊಂಡ ಅತ್ಯಾಧುನಿಕ ‘ಝರಾ’ ಕನ್ವೆನ್ಶನ್ ಸೆಂಟರ್‌ನ್ನು (ಸಭಾಂಗಣ) ಭಾನುವಾರ (ಡಿ.೨೬) ಗ್ರ‍್ಯಾಂಡ್ ಮುಫ್ತಿ ಕಾಂತಪುರ ಎ ಪಿ ಅಬೂಬಕ್ಕರ್ ಮುಸ್ಲಿಯಾರ್, ದ.ಕ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಿದರು.
ಎ ಪಿ ಅಬೂಬಕ್ಕರ್ ಮಾತನಾಡಿ, ಸುತ್ತಲ ಪ್ರದೇಶ ಹಾಗೂ ದೂರದೂರಿನ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸಭಾಂಗಣ ನಿರ್ಮಿಸಲಾಗಿದ್ದು, ಎಲ್ಲರೂ ನೂತನ ಸಭಾಂಗಣದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ಜಿಲ್ಲೆಯಲ್ಲಿ ಈ ವಿನೂತನ ಸಭಾಂಗಣ ಹೊಸ ಇತಿಹಾಸ ಸೃಷ್ಟಿಸಿದೆ. ಎಲ್ಲರಿಗೂ ಇದು ಹತ್ತಿರವಾಗಲಿ ಎಂದರು.
ಮಾಜಿ ಸಚಿವ, ಹಾಲಿ ಶಾಸಕ ಯು ಟಿ ಖಾದರ್ ಮಾತನಾಡಿ, ಕರಾವಳಿ ಕರ್ನಾಟಕಕ್ಕೆ ಸಭಾಂಗಣ ಕಿರೀಟದಂತಿದೆ. ಇದರ ರೂವಾರಿ ಝಕಾರಿಯಾ ಬಜ್ಪೆಯವರು ಯುವಕರಿಗೆ ಮಾದರಿಯಾಗಿದ್ದು, ಪ್ರಾಮಾಣಿಕತೆ ಮತ್ತು ಬದ್ಧತೆ ಅವರನ್ನು ಇಷ್ಟೊಂದು ಎತ್ತರಕ್ಕೆ ಕೊಂಡೊಯ್ದಿದಿದೆ ಎಂದರು.
ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವಾ, ಎನ್‌ಆರ್‌ಐ ಫೋರಂನ ನಿಕಟಪೂರ್ವ ಅಧ್ಯಕ್ಷೆ ಡಾ. ಆರತಿ ಕೃಷ್ಣ, ರಾಜ್ಯಸಭಾ ಮಾಜಿ ಸದಸ್ಯ ಬಿ ಇಬ್ರಾಹಿಂ, ಎಸ್‌ಡಿಪಿಐ ದಕ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ಉದ್ಯಮಿ ಬಿ ಎಂ ಶರೀಫ್, ಸೂರಲ್ಪಾಡಿ ಜುಮಾ ಮಸೀದಿ ಖತೀಬ್ ಮೌಲಾನಾ ಉಸ್ಮಾನ್ ದಾರಿಮಿ, ಕೈಕಂಬ ಪೋಂಪೈ ಚರ್ಚ್ ಧರ್ಮಗುರು ಫಾ. ಆ್ಯಂಟನಿ ಲೋಬೊ, ಅಬ್ದುಲ್ಲ ಮೋನು ಖತಾರ್, ಬಿ ಎಂ ಮುಮ್ತಾಝ್ ಅಲಿ, ಅಂತಾರಾಷ್ಟ್ರೀಯ ತರಬೇತುದಾರ ಮುನವರ್ ಝಮಾ, ‘ಝರಾ’ ನಿರ್ದೇಶಕರಾದ ಜಾಹಿರ್ ಝಕಾರಿಯಾ, ನಝೀರ್ ಝಕಾರಿಯಾ, ಜಾಹಿದ್ ಝಕಾರಿಯಾ, ಎಸ್ ಎಂ ಬಶೀರ್ ಹಾಜಿ, ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ವಕ್ಫ್ ಬೋರ್ಡ್ ನ ನೂತನ ಅಧ್ಯಕ್ಷ ಮೌಲನಾ ಶಾಫಿ ಸಅದಿ ಅವರನ್ನು ಸನ್ಮಾನಿಸಲಾಯಿತು. ಎಂಎಲ್‌ಸಿ ಮಂಜುನಾಥ ಭಂಡಾರಿ ‘ಝರಾ’ ಲಾಂಛನ ಅನಾವರಣಗೊಳಿಸಿದರು. ಶಾಸಕ ಯು ಟಿ ಖಾದರ್ ಬುಕ್ಕಿಂಗ್ ವ್ಯವಸ್ಥೆಯ ಪ್ರೊಫೈಲ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿದಸಿದ ಝರಾ ಕನ್ವೆನ್ಶನ್ ಸೆಂಟರ್‌ನ ಅಧ್ಯಕ್ಷ ಬಿ ಝಕಾರಿಯಾ ಜೋಕಟ್ಟೆ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಮಾ. ನಝಿಮುದ್ದೀನ್ ಮತ್ತು ಮಾ. ರಿಯಾಝ್ ಕಿರಾಅತ್ ಖುರ್‌ಆನ್ ಪಠಿಸಿದರು. ಸಾಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು.
‘ಝರಾ’ ವಿಶೇಷತೆ :ರಾಷ್ಟ್ರೀಯ ಹೆದ್ದಾರಿಯ(೧೬೯) ಗಂಜಿಮಠದಲ್ಲಿ ಸುಮಾರು ಮೂರು ಎಕ್ರೆ ಜಾಗದಲ್ಲಿ ತಲೆ ಎತ್ತಿರುವ ‘ಝರಾ’ ಕನ್ವೆನ್ಶನ್ ಸೆಂಟರ್‌ನ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ೪ ಸಭಾಂಗಣಗಳಿದ್ದು, ಎಲ್ಲವೂ ಹವಾನಿಯಂತ್ರಿತವಾಗಿವೆ. ವೈಫೈ ಸೌಕರ್ಯ, ವರ್ಟಿಕಲ್ ಗಾರ್ಡನ್, ಸ್ಟೋನ್ ಫೌಂಟೇನ್, ವಿಶಾಲ ಅಡುಗೆ ಕೋಣೆ ಒಳಗೊಂಡಿದೆ. ಏಕಕಾಲದಲ್ಲಿ ಸುಮಾರು ೬೫ ವಾಹನ ಪಾರ್ಕಿಂಗ್, ೨೪ ತಾಸು ವಿದ್ಯುತ್ ಸೌಲಭ್ಯ, ಒಟ್ಟು ೪ ಸಭಾಂಗಣಗಳಲ್ಲಿ ೫,೦೦೦ ಆಸನಗಳ ಸಾಮರ್ಥ್ಯವಿದೆ.
