ಕೈಕಂಬ : ಗುರುಪುರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಇದರ ನೂತನ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಭಾಷಾ ಅವರು ಭಾನುವಾರ ‘ಪದಗ್ರಹಣ’ ಮಾಡಿದರು.
ಗುರುಪುರ ಕೈಕಂಬದ ಖಾಸಗಿ ಸಭಾಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಪಕ್ಷದ ಧ್ವಜ ಹಸ್ತಾಂತರ ಮಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಪಕ್ಷಕ್ಕೆ ಅಲ್ಪಸಂಖ್ಯಾತರ ಬೆಂಬಲ ಮರೆಯುವಂತಿಲ್ಲ. ಜಾತಿ-ಧರ್ಮ ಮೀರಿದ ಕಾಂಗ್ರೆಸ್ ಪಕ್ಷವು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಅಸನ-ವಸನ-ಆಶ್ರಯ ನೀಡಿದೆ. ಒಗ್ಗಟ್ಟಿನ ಕೊರತೆಯಿಂದ ಈಗ ಪಕ್ಷ ಸ್ವಲ್ಪ ಹಿಂದೆ ಬಿದ್ದಿದೆ. ಅದೇನೇ ಇದ್ದಾಗಲೂ, ದೇಶದಲ್ಲಿ ಕಾಂಗ್ರೆಸ್ ಸೋತಾಗ ಬಿಜೆಪಿ ಗೆಲ್ಲುತ್ತದೆ, ಬಿಜೆಪಿ ಸೋತಾಗ ಕಾಂಗ್ರೆಸ್ ಗೆಲ್ಲುತ್ತದೆ ಎಂದರು.
ಮಾಜಿ ಶಾಸಕ ಡಾ. ಮೊಯಿದಿನ್ ಬಾವಾ ಮಾತನಾಡಿ, ಪಕ್ಷದ ಎಲ್ಲ ಸಮಿತಿ-ಘಟಕ, ನಾಯಕರು ಮತ್ತು ಕಾರ್ಯಕರ್ತರು ಪಕ್ಷ ಬಲಪಡಿಸುವ ಕೆಲಸದಲ್ಲಿ ಸಕ್ರಿಯರಾಗಬೇಕು. ಬಿಜೆಪಿಯ ಪೊಳ್ಳು ಭರವಸೆಗಳಿಗೆ ತಕ್ಕ ಪಾಠ ಕಲಿಸುವ ಕಾಲ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಪಸಂಖ್ಯಾತರ ಯೋಜನೆಗಳಿಗೆ ಅಡ್ಡಗಾಲಿಡುತ್ತಿದೆ. ಎಲ್ಲರೂ ಒಂದು ‘ಟೀಂ’ ಆಗಿ ಕೆಲಸ ಮಾಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ ಕೆ ಸಾಹುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಮಾಜಿ ಎಂಎಲ್‌ಸಿ ಐವನ್ ಡಿ’ಸೋಜ, ಮುಖಂಡರಾದ ಗಿರೀಶ್ ಆಳ್ವ, ಶಾಲೆಟ್ ಪಿಂಟೊ, ಯು ಪಿ ಇಬ್ರಾಹಿಂ, ಆಲ್ವಿನ್ ಪ್ರಕಾಶ್, ಸುರಯ್ಯಾ, ಅನಿಲ್ ಕುಮಾರ್, ಪದ್ಮನಾಭ ಕೋಟ್ಯಾನ್, ಗಣೇಶ್ ಪೂಜಾರಿ ಗಂಜಿಮಠ, ಜಯಶೀಲ ಅಡ್ಯಂತಾಯ, ಟಿ ಎಂ ಇರ್ಫಾನ್, ಎಂ ಇಸ್ಮಾಯಿಲ್, ಅಬ್ದುಲ್ ಸಮದ್ ಅಡ್ಯಾರು, ಅಬ್ದುಲ್ ಲತೀಫ್ ಅಬ್ದುಲ್ಲ, ಮುಫೀದ್, ವೇಣುಗೋಪಾಲ, ಅಬ್ದುಲ್ ರೆಹಮಾನ್ ವಳಚ್ಚಿಲ್‌ಪದವು, ಅಬ್ದುಲ್ ಬಶೀರ್, ಕೀರ್ತಿರಾಜ್, ಸೆಲಿನಾ ಫೆರ್ನಾಂಡಿಸ್, ವಿನಯ್ ಕುಮಾರ್ ಶೆಟ್ಟಿ, ಕೃಷ್ಣ ಬಂಗೇರ ಆದ್ಯಪಾಡಿ, ಹರಿಯಪ್ಪ, ಅಕ್ಬರ್ ಭಾಷಾ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ ಅಬ್ದುಲ್ ಅಝೀಝ್ ಭಾಷಾ ಅವರೊಂದಿಗೆ ಘಟಕದ ಉಪಾಧ್ಯಕ್ಷರು, ಕಾಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಮಾಧ್ಯಮ ವಕ್ತಾರರು, ಸಂಯೋಜಕರು ಅಧಿಕಾರ ಸ್ವೀಕರಿಸಿದರು. ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
