ಮುಂಬಯಿ : ಮುಂಬಯಿ ಅಲ್ಲಿನ ಬಹುಮುಖ ಪ್ರತಿಭಾವಂತ ಕವಿ, ಅಂಕಣಕಾರ, ಕಥೆಗಾರ ಗೋಪಾಲ ತ್ರಾಸಿ ಅವರ ‘ಲಂಡನ್ ಟು ವ್ಯಾಟಿಕನ್ ಸಿಟಿ’ (ಎಂಟು ದೇಶ ನೂರೆಂಟು ವಿಶೇಷ), ಈ ಪ್ರವಾಸ ಕಥನ ಕೃತಿಯು ಇದೇ ಡಿ.೧೯ರಂದು ಭಾನುವಾರ ಸಂಜೆ ೫.೩೦ ಗಂಟೆಗೆ ಕಾರಂತ ಥೀಮ್ ಪಾರ್ಕ್, ಕೋಟ, ಉಡುಪಿ ಜಿಲ್ಲೆ ಇಲ್ಲಿ ಆಯೋಜಿಸಲ್ಪಟ್ಟ ”ಬೆಳದಿಂಗಳ ಕವಿ ಸಮ್ಮೇಳನ” ದಲ್ಲಿ ಬಿಡುಗಡೆ ಗೊಳ್ಳಲಿದೆ.
ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವ ಸುರೇಂದ್ರ ಅಡಿಗ ಅವರು ಕೃತಿ ಅನಾವರಣ ಮಾಡಲಿದ್ದು, ಶಿಕ್ಷಕ, ಸಾಹಿತಿ ಸತೀಶ್ ವಡ್ಡರ್ಸೇ ಕೃತಿ ಪರಿಚಯಿಸುವರು.
ನಾಡಿನ ಹಿರಿಯ ಪತ್ರಕರ್ತ, ಸಾಹಿತಿ ಗಣೇಶ ಅಮೀನಗಡ ಅವರ ಮುನ್ನುಡಿ, ಪ್ರಶಸ್ತಿ ಪುರಸ್ಕೃತ ನಾಟಕಕಾರ ಕವಿ ಸಾ.ದಯಾ ಅವರ ಬೆನ್ನುಡಿ ಹಾಗೂ ಕಲಾವಿದ ಗಣೇಶ್ ಕುಮಾರ್ ಅವರ ಮುಖಪುಟ ವಿನ್ಯಾಸದೊಂದಿಗೆ ಲೇಖಕ ಕಲಾವಿದ ಗೆಳೆಯರ ಬಳಗದ ಸಹಾಯದೊಂದಿಗೆ ಚುಕ್ಕಿ ಸಂಕುಲ ಮುಂಬಯಿ ಪ್ರಕಾಶಿತ ಕೃತಿ ಇದಾಗಿದೆ. ಮೂರು ಕವನ ಸಂಕಲನ, ಒಂದು ಕಥಾ ಸಂಕಲನ, ಒಂದು ಅಂಕಣ ಬರಹದ ಜೊತೆ, ಒಂದು ವ್ಯಕ್ತಿ ಚಿತ್ರಣಗಳ ಜೊತೆ ರಚಿತ ಗೋಪಾಲ ತ್ರಾಸಿ ಅವರ ಏಳನೇ ಕೃತಿ.
ಈಗಾಗಲೇ ಮೂರು ಕವನ ಸಂಕಲನ, ಒಂದು ಕಥಾಸಂಕಲನ, ಎರಡು ಸಂಪಾದಿತ ಕೃತಿಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ತ್ರಾಸಿ ಓರ್ವ ಕನ್ನಡದ ಸಂವೇದನಾಶೀಲ ಕವಿ ಎಂದೇ ಗುರುತಿಸಿ ಕೊಂಡಿದ್ದಾರೆ. ಅಸೋಸಿಯೇಶನ್ ಆಫ್ ಕನ್ನಡ ಕೂಟ’ಸ್ ಆಫ್ ಅಮೇರಿಕಾ ಸಂಯೋಜಿತ ವಿಶ್ವದ ಪ್ರತಿಷ್ಠಿತ ಅಕ್ಕ ಸಂಸ್ಥೆಯು ಅಮೆರಿಕದಲ್ಲಿ ನಡೆಸಿದ್ದ ಹತ್ತನೇ ವಿಶ್ವ ಅಕ್ಕ ಕನ್ನಡ ಸಮೇಳನದಲ್ಲಿ ನಾಡಿನ ಹೆಸರಾಂತ ಕವಿ ಜಯಂತ್ ಕಾಯ್ಕಿಣಿ ಅಧ್ಯಕ್ಷತೆಯಲ್ಲಿ ಜರಗಿದ ಶ್ರಾವಣ ಕವಿಗೋಷ್ಠಿಯಲ್ಲಿ ಗೋಪಾಲ ತ್ರಾಸಿ ತನ್ನ ಕಾವ್ಯತ್ಮಕ, ಆಕರ್ಷಕ ಶೈಲಿಯ ಗಾಯನದ ಮೂಲಕ ತನ್ನ ಕವಿತೆಯನ್ನು ಪ್ರಸ್ತುತ ಪಡಿಸಿ ಕನ್ನಡದ ಕಂಪನ್ನು ಪಸರಿಸಿವಿಶ್ವದ ಕವಿಮನಗಳನ್ನು ಗೆದ್ದಿರುವರು. ಬಹುಮುಖ ಪ್ರತಿಭೆ ಆಗಿರುವ ತ್ರಾಸಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟç ಇದರ ಸಕ್ರೀಯ ಸದಸ್ಯರೂ, ಕ್ರೀಡಾಪಟು ಕೂಡಾ ಆಗಿದ್ದು, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಹಿರಿಯ ಪ್ರಬಂಧಕ ಆಗಿ ಮುಂಬಯಿಯಲ್ಲಿ ವೃತ್ತಿನಿರತರಾಗಿದ್ದಾರೆ.

