ಮುಂಬಯಿ: ಯುವವಾಹಿನಿ (ರಿ.) ಮಂಗಳೂರು ಕೊಡ ಮಾಡುವ ವಾರ್ಷಿಕ `ವಿಶುಕುಮಾರ್ ಪ್ರಶಸ್ತಿ-೨೦೨೧’ಯನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೊ| ಡಾ| ತುಕಾರಾಮ ಪೂಜಾರಿ ನ.07ರಂದು ಆದಿತ್ಯವಾರ ಪ್ರದಾನಿಸಲಾಯಿತು.
ಕತೆ, ಕಾದಂಬರಿಗಾರ, ನಟ ನಿರ್ದೇಶಕ, ಪತ್ರಕರ್ತರಾಗಿದ್ದು ಬಹುಮುಖಿ ಪ್ರತಿಭೆಯಿಂದ ಕನ್ನಡ-ತುಳು ಭಾಷೆಗಳ ಕಲಾಸೇವೆಗೈದು ಸ್ವರ್ಗೀಯರಾದ ವಿಶುಕುಮಾರ್ ಸ್ಮರಣಾರ್ಥ ವಾರ್ಷಿಕ `ವಿಶುಕುಮಾರ್ ಪ್ರಶಸ್ತಿ-೨೦೨೧’ ಪ್ರಶಸ್ತಿಯನ್ನು ಮಂಗಳೂರು ಕೊಲ್ಯ ಇಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ಕರಾವಳಿಯ ಜಾನಪದ ಸಂಶೋಧಕ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಅಧ್ಯಕ್ಷ ಪ್ರೊ| ಡಾ| ತುಕಾರಾಮ ಪೂಜಾರಿ ಇವರಿಗೆ ಶಿಕ್ಷಣ ತಜ್ಞ, ಹಿರಿಯ ರಂಗಭೂಮಿ ಕಲಾವಿದ ಮಹಾಬಲೇಶ್ವರ ಟಿ.ಹೆಬ್ಬಾರ್ ಪ್ರದಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಶಾಸಕ, ಮಾಜಿ ಸಚಿವ ಯು.ಟಿ.ಖಾದರ್, ಅತಿಥಿ ಅಭ್ಯಾಗತರುಗಳಾಗಿ ಹಿರಿಯ ವಕೀಲರಾದ ಟಿ.ನಾರಾಯಣ ಪೂಜಾರಿ, ಆರ್.ಪದ್ಮರಾಜ್, ಡಾ| ಆಶಾಲತ ಸುವರ್ಣ, ಶಂಕರ್ ಸುವರ್ಣ, ವೇಣುಗೋಪಾಲ್ ಕೊಲ್ಯ ಮುಂತಾದ ಗಣ್ಯರು, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಡಾ| ರಾಜಾರಾಮ್ ಕೆ.ಬಿ., ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್ ಪಡ್ಪು, ಕೊಲ್ಯ ಘಟಕದ ಅಧ್ಯಕ್ಷ ಮೋಹನ್ ಮಾಡೂರು, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕ ಶಶಿಧರ ಕಿನ್ನಿಮಜಲು ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

