ಮುತ್ತೂರು ಕೋರ್ಟ್ ತಡೆ ಉಲ್ಲಂಘಿಸಿ ರುದ್ರಭೂಮಿ ಹತ್ತಿರ ಪೆಟ್ರೋಲ್ ಪಂಪ್ ಸ್ಥಾಪನೆ: ಸ್ಥಳೀಯರ ವಿರೋಧ
ಕೈಕಂಬ : ಮಂಗಳೂರು ತಾಲೂಕಿನ ಮುತ್ತೂರು ಗ್ರಾಮದ ನೋಣಾಲು ಎಂಬಲ್ಲಿ ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಹಿಂದೂ ರುದ್ರಭೂಮಿಗೆ ೫೦ ಮೀಟರ್ ಅಂತರದೊಳಗೆ ಪೆಟ್ರೋಲ್ ಪಂಪೊಂದು ನಿರ್ಮಾಣವಾಗುತ್ತಿದೆ. ಅಧಿಕೃತ ನಿಯಮವೊಂದರ ಪ್ರಕಾರ ಪೆಟ್ರೋಲ್ ಪಂಪ್ ಹತ್ತಿರದಲ್ಲಿ ಯಾವುದೇ ಜ್ವಲನಶೀಲ ರಚನೆಗಳು ಇರಕೂಡದು. ಮುತ್ತೂರಿನಲ್ಲಿ ಈ ನಿಯಮ ಉಲ್ಲಂಘನೆಯಾಗಿದ್ದು, ನಿರ್ಮಾಣಾಧೀನ ಪೆಟ್ರೋಲ್ ಪಂಪ್ನಿAದ ಹತ್ತಿರದಲ್ಲೇ ಅಸ್ತಿತ್ವದಲ್ಲಿರುವ ರುದ್ರಭೂಮಿಗೆ ಧಕ್ಕೆ ಉಂಟಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.ಸ್ಥಳೀಯರ ಆತಂಕ ಕಡೆಗಣಿಸಿ ರುದ್ರಭೂಮಿಯ ಪಕ್ಕದಲ್ಲೇ ಪಂಪ್ ಸ್ಥಾಪಿಸಲಾಗುತ್ತಿದ್ದರೂ, ಭವಿಷ್ಯದ ದಿನಗಳಲ್ಲಿ ಪೆಟ್ರೋಲ್ ಪಂಪ್ಗೆ ರುದ್ರಭೂಮಿಯಿಂದ ಅಪಾಯವಿದೆ ಎಂದು ಹೇಳಿ ಹಿಂದೂ ರುದ್ರಭೂಮಿ ಎತ್ತಂಗಡಿಗೆ ನಿರ್ದೇಶನಗಳು ಬಂದರೂ ಬರಬಹುದು. ಆಗ ಹಿಂದೂಗಳ ಭಾವನೆ ಧಕ್ಕೆಯುಂಟಾಗಿ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಪರವಾನಿಗೆ ಹಿಂದಕ್ಕೆ ಪಡೆದ ಪಂಚಾಯತ್ : ಪೆಟ್ರೋಲ್ ಪಂಪ್ ಸ್ಥಾಪಿಸಲು ಅರ್ಜಿಯಲ್ಲಿ ಗೊತ್ತುಪಡಿಸಲಾಗಿದ್ದ ಸರ್ವೇ ನಂಬ್ರದ ಜಾಗಕ್ಕೆ ಬದಲಾಗಿ ಬೇರೊಂದು ಸರ್ವೇ ನಂಬ್ರದಲ್ಲಿ ಪಂಪ್ ಸ್ಥಾಪಿಸಲಾಗುತ್ತಿದೆ ಎಂಬ ವಿಷಯ ಗಮನಕ್ಕೆ ಬರುತ್ತಲೇ ಪಂಚಾಯತ್, ಅರ್ಜಿದಾರರಿಗೆ ನೀಡಿದ್ದ ಒಪ್ಪಿಗೆ ಪತ್ರ ಹಿಂದಕ್ಕೆ ರದ್ದುಪಡಿಸಿದೆ.
ಪೆಟ್ರೋಲ್ ಪಂಪ್ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಮುತ್ತೂರು ಹಿಂದೂ ರುದ್ರಭೂಮಿ ನಿರ್ವಹಣಾ ಸಮಿತಿ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರೂ, ಕಾನೂನು ಉಲ್ಲಂಘಿಸಿ ಪಂಪ್ ನಿರ್ಮಾಣ ಕಾಮಗಾರಿ ಮುಂದುವರಿದಿದೆ. ರುದ್ರಭೂಮಿಯ ಹತ್ತಿರ ಪೆಟ್ರೋಲ್ ಪಂಪ್ ಸ್ಥಾಪನೆಯಿಂದ ಭವಿಷ್ಯದಲ್ಲಿ ಅನಾಹುತಗಳು ಸಂಭವಿಸಿದರೆ ಇಲಾಖೆಗಳೇ ಜವಾಬ್ದಾರವಾಗುತ್ತವೆ” ಎಂದು ಸಮಿತಿಯ ಅಧ್ಯಕ್ಷ ಹಾಗೂ ತಾಪಂ ನಿಕಪೂರ್ವ ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು ಹೇಳಿದರು.ಡೀಸಿ ಭರತ್ಲಾಲ್ ಮೀನಾ ಇರುವಾಗ ನೋಣಾಲ್ನಲ್ಲಿ ರುದ್ರಭೂಮಿಗೆ ೫೦ ಸೆಂಟ್ಸ್ ಅರಣ್ಯ ಜಾಗ ಸಿಕ್ಕಿದ್ದು, ಅಲ್ಲಿ ಉಳಿದ ಖಾಲಿ ಜಾಗದದಲ್ಲಿ ಇಲಾಖೆ ಅರಣ್ಯ ಬೆಳೆಸಿತ್ತು. ಬಳಿಕ ರುದ್ರಭೂಮಿಯ ಜಾಗ ಹೊರತುಪಡಿಸಿದ ಜಾಗ ಇತರರ ಪಾಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಪ್ರಸಕ್ತ ಧಾರಾಕಾರ ಮಳೆಗೆ ಪಂಪ್ ನಿರ್ಮಾಣ ಪ್ರದೇಶದಲ್ಲಿ ಭಾರೀ ಗುಡ್ಡ ಜರಿದಿದ್ದು, ಉಪಕರಣಗಳಿಗೆ ಹಾನಿಯಾಗಿದೆ ಮತ್ತು ಹಿಂದೂ ರುದ್ರಭೂಮಿಗೆ ಅಪಾಯ ಎದುರಾಗಿದೆ ಎಂದು ಶೆಟ್ಟಿ ತಿಳಿಸಿದರು.
‘ಪೆಟ್ರೋಲ್ ಪಂಪ್ ಸ್ಥಾಪಿಸಲು ಪೊಲೀಸ್ ಆಯುಕ್ತರು ನಿರಪೇಕ್ಷಣಾ ಪತ್ರ(ಎನ್ಒಸಿ) ನೀಡಿದ್ದಾರೆ. ಪಂಚಾಯತ್ ಒಪ್ಪಿಗೆ ನೀಡಿತ್ತು. ಬಳಿಕ ಕೋರ್ಟ್ ತಡೆಯಾಜ್ಞೆ ತಂದಿರುವ ಅಥವಾ ಪಂಚಾಯತ್ ಪರವಾನಿಗೆ ಹಿಂದಕ್ಕೆ ಪಡೆದಿರುವ ಮಾಹಿತಿ ಇಲ್ಲ” ಎಂದು ಇಂಡಿಯನ್ ಆಯುಲ್ ಕಾರ್ಪೊರೇಶನ್(ಮಂಗಳೂರು) ರಿಟೈಲ್ಸ್ ವಿಭಾಗದ ಸಹಾಯಕ ಪ್ರಬಂಧಕ ಅಭಿನವ್ ತಿಳಿಸಿದರು.