ನವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮದವರಿಗೆ ಹಮ್ಮಿಕೊಂಡಿದ್ದ ಚಹಾ ಕೂಟದಲ್ಲಿ ಮಾಧ್ಯಮದವರಿಗೆ ಹಬ್ಬದ ಶುಭಾಶಯ ಕೋರಿ ಅಭಿನಂದಿಸಿದ್ದಾರೆ.
ಶನಿವಾರ ಬೆಳಗ್ಗೆ 11.30ಗೆ ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಪ್ರಧಾನ ಕಾರ್ಯಾಲಯದಲ್ಲಿ ಮೋದಿ ಮತ್ತು ಪತ್ರಕರ್ತರ ‘ದೀಪಾವಳಿ ಮಿಲನ್’ ಚಹಾಕೂಟ ನಡೆದಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಪತ್ರಕರ್ತರ ಕೆಲಸವನ್ನು ಪ್ರಶಂಸಿಸಿದ್ದಾರೆ.

ತಾನು ಮಾಧ್ಯಮದವರೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದೇನೆ ಎಂದು ಹೇಳಲಾಗುತ್ತಿದೆ ಆದರೆ ನನಗೆ ಪತ್ರಕರ್ತರೊಂದಿಗೆ ಸ್ನೇಹಮಯ ಸಂಬಂಧವಿದೆ ಎಂದು ಅವರು ಹೇಳಿದ್ದಾರೆ.
ಈ ದೀಪಾವಳಿ ಬಿಜೆಪಿ ಪಾಲಿಗೆ ತುಂಬಾನೇ ಅದೃಷ್ಟವನ್ನು ತಂದಿದೆ. ಸಾರ್ವತ್ರಿಕ ಚುನಾವಣೆಯ ನಂತರ ಬಿಜೆಪಿ ಹಲವು ಗೆಲವುಗಳನ್ನು ಕಂಡಿದೆ. ಮಾಧ್ಯಮಗಳ ಮೂಲಕ ಸರ್ಕಾರದ ಶೇ. 80 ರಷ್ಟು ಕಾರ್ಯಗಳು ನೆರವೇರಿದೆ. ಇದಕ್ಕೆ ಸಹಕರಿಸಿದ ನಿಮಗೆಲ್ಲರಿಗೂ ಅಭಿನಂದನೆ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಮೋದಿ ತಮ್ಮ ಮಾತು ಆರಂಭಿಸಿದ್ದಾರೆ.
ಸ್ವಚ್ಛತಾ ಆಂದೋಲನದಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಮಹತ್ತರವಾದ ಪಾತ್ರವನ್ನು ವಹಿಸಿವೆ. ನಮ್ಮ ಯೋಜನೆಗೆ ಮಾಧ್ಯಮಗಳಿಂದ ಉತ್ತಮ ಸಹಕಾರ ಲಭಿಸಿದೆ. ಅಂಕಣಕಾರರು ಪತ್ರಿಕೆಗಳಲ್ಲಿ ‘ಸ್ವಚ್ಛ ಭಾರತ್ ಅಭಿಯಾನ’ದ ಬಗ್ಗೆ ಬರೆದಿದ್ದಾರೆ. ಅಲ್ಲಿಯವರೆಗೆ ಅಂಕಣದಲ್ಲಿ ಸ್ವಚ್ಛತೆಯ ಬಗ್ಗೆ ಇಷ್ಟೊಂದು ಲೇಖನಗಳು ಬಂದಿರಲಿಲ್ಲ. ಮಾಧ್ಯಮಗಳು ಕ್ಲೀನ್ ಇಂಡಿಯಾ ಸಂದೇಶವನ್ನು ಜನರಿಗೆ ತಲುಪಿಸಿದ್ದು, ಇಲ್ಲಿ ಮಾಧ್ಯಮದವರು ತಮ್ಮ ಲೇಖನಿಯನ್ನು ಪೊರಕೆಯಾಗಿ ಪರಿವರ್ತಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ವೇದಿಕೆಯೇರಿ ಕೆಲವೇ ನಿಮಿಷಗಳ ಕಾಲ ಮಾತನಾಡಿದ ಮೋದಿ ನಂತರ ಎಲ್ಲ ಪತ್ರಿಕಾ ಪ್ರತಿನಿಧಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ಚಹಾಕೂಟದ ನಂತರ ಮೋದಿ ಪತ್ರಕರ್ತರೊಂದಿಗೆ ಸಂವಾದ ನಡೆಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಆ ಕಾರ್ಯಕ್ರಮ ರದ್ದುಗೊಂಡಿದೆ.
