ಮುಂಬಯಿ : ಜಿಎಸ್‌ಬಿ ಸಭಾ ದಹಿಸರ್ ಬೋರಿವಿಲಿ ಸಂಸ್ಥೆಯು ಸಾರ್ವಜನಿಕರಿಗಾಗಿ ಉಚಿತ ಕೋವಿಡ್ ಲಸಿಕರಣ ಕಾರ್ಯಕ್ರಮವನ್ನು ಭಾನುವಾರ ದಹಿಸರ್ ಪೂರ್ವದ ವಿದ್ಯಾ ಮಂದಿರ್ ಶಾಲಾ ಸಭಾಗೃಹದಲ್ಲಿ ಆಯೋಜಿಸಿತ್ತು. ಜಾಗತಿಕವಾಗಿ ಕೋವಿಡ್‌ನ ಚಾಲ್ತಿಯಲ್ಲಿರುವ ಪರಿಸ್ಥಿತಿಗಳನ್ನು ಗಮನದಲ್ಲಿರಿಸಿ ಈ ಮಹಾಮಾರಿಯೂ ಶೀಘ್ರವೇ ಕೊನೆಯಾಗುವಂತೆ ಪ್ರಾರ್ಥಿಸಿ ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹದೊಂದಿಗೆ ಜಿಎಸ್‌ಬಿ ಸಭಾ ದಹಿಸರ್ ಬೋರಿವಿಲಿ ಅಧ್ಯಕ್ಷ ಎಂ.ಉದಯ ಪಡಿಯಾರ್ ಅವರು ಪದಾಧಿಕಾರಿಗಳನ್ನೊಳಗೊಂಡು ಸಾಂಕೇತಿಕವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು.
ಸ್ಥಾನೀಯ ಮಾಜಿ ಶಾಸಕ ವಿನೋದ್ ಘೊಸಾಳ್ಕರ್ ಮತ್ತು ದಹಿಸರ್ ಕಾರ್ಪೊರೇಟರ್ ಜಗದೀಶ್ ಓಜಾ ಉಪಸ್ಥಿತರಿದ್ದು ದೀಪ ಬೆಳಗಿಸಿ ಕೋವಿಡ್ ಲಸಿಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುರಾನಾ ಗ್ರೂಪ್ ಆಫ್ ಹಾಸ್ಪಿಟಲ್ಸ್ ತಂಡದ ವೈದ್ಯರು ಮತ್ತು ದಾದಿಯರು ಚುಚ್ಚುಮದ್ದು ಹಾಕಿಸುವಲ್ಲಿ ಶ್ರಮಿಸಿದ್ದರು.
ಈ ಸಂದರ್ಭದಲ್ಲಿ ಗಣ್ಯರನೇಕರು, ಜಿ.ಎಸ್.ಬಿ ಸಭಾ ದಹಿಸರ್ ಬೋರಿವಿಲಿ ಗೌ| ಪ್ರ| ಕಾರ್ಯದರ್ಶಿ ವಿಷ್ಣು ಆರ್.ಕಾಮತ್, ಗೌ| ಕೋಶಾಧಿಕಾರಿ ಮೋಹನ್ ಎ.ಕಾಮತ್, ಜತೆ ಕಾರ್ಯದರ್ಶಿ ಗುರುಪ್ರಸಾದ್ ಪೈ, ಜತೆ ಕೋಶಾಧಿಕಾರಿ ಪ್ರಭಾಕರ್ ಕಾಮತ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು, ಸದಸ್ಯರು, ಸೇವಾಕರ್ತರು ಉಪಸ್ಥಿತರಿದ್ದರು.
ಕುಲದೇವರು, ಶ್ರೀ ಕಾಶೀ ಮಠದ ಶ್ರೀ ವಿಠಲ ರುಖುಮಾಯಿ ಮತ್ತು ದೇವತೆಗಳಿಗೆ ಶಿವಾನಂದ ಭಟ್ ಪೂಜೆ ನೆರವೇರಿಸಿ ಅಖಂಡ ರಾಷ್ಟ್ರದ ಸ್ವಸ್ಥತೆಗಾಗಿ ಎಲ್ಲರೂ ಪ್ರಾಮಾಣಿಕವಾಗಿ ಸಹರಿಸುವ ಸದ್ಭುದ್ಧಿ ಶ್ರೀದೇವರು ಕರುಣಿಸಲಿ ಈ ಮೂಲಕ ಎಲ್ಲರೂ ನೆಮ್ಮದಿಯಿಂದ ಬಾಳುವಂತಾಗಲಿ. ಯೋಗಕ್ಷೇಮಕ್ಕಾಗಿ ಹರಿ ಗುರುವಿನ ಕಮಲದ ಪಾದದಲ್ಲಿ ನಾವೆಲ್ಲರೂ ಪ್ರಾರ್ಥಿಸೋಣ ಎಂದು ಹರಸಿದರು.
ಜಿಎಸ್‌ಬಿ ಸಮಾಜದ ಹಿತೈಷಿಗಳು, ದಾನಿಗಳು, ಪ್ರಾಯೋಜಕರು ಮತ್ತು ಸಾರ್ವಜನಿಕರ ಸಹಯೋಗದೊಂದಿಗೆ ನಡೆಸಲ್ಪಟ್ಟ ಕಾರ್ಯರಮದಲ್ಲಿ ಸಭಾದ ಸ್ವಯಂಸೇವಕರು ನಿಸ್ವಾರ್ಥ ಸೇವೆಗೈದರು. ಉಭಯ ಸರ್ಕಾರ, ಬಿಎಂಸಿ ಮತ್ತು ಮತ್ತಿತರ ಇಲಾಖೆಗಳು ವಿಧಿಸಿರುವ ಎಲ್ಲಾ ಶಿಷ್ಟಾಚಾರಗಳ ಪಾಲನೆಯೊಂದಿಗೆ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲ್ಪಟ್ಟಿತು ಎಂದು ಎಂದು ಜಿಎಸ್‌ಬಿ ಸಭಾ ದಹಿಸರ್ ಬೋರಿವಿಲಿ ಉಪಾಧ್ಯಕ್ಷ ಸಾಣೂರು ಮನೋಹರ್ ವಿ.ಕಾಮತ್ ತಿಳಿಸಿ ಸರ್ವರ ಶ್ರಮಕ್ಕೆ ಉಪಕಾರ ಸ್ಮರಿಸಿದರು.
