ಸುದ್ದಿ9ಕೈಕಂಬ: ಪೊಳಲಿ ಸಮೀಪದ ಮಣಿಕಂಠಪುರದ ಶುಭವತಿ ವಿ. ಪೂಜಾರಿ ಎಂಬವರ ಮನೆಯಲ್ಲಿ ದೀಪಾವಳಿ ಪ್ರಯುಕ್ತ ಗೋಪೂಜೆ ಮಾಡುವ ಮೂಲಕ ಗೋವುಗಳನ್ನು ವಂದಿಸಲಾಯ್ತು. ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಗಳು ಈ ಕಾರ್ಯಕ್ರಮದ ಧಾರ್ಮಿ ಕ ವಿಧಿವಿಧಾನಗಳನ್ನು ನೆರವೇರಿಸಿದರು. ಬೆಳಿಗ್ಗೆ ಲಕ್ಷ್ಮೀಪೂಜೆಯನ್ನು ನೆರವೇರಿಸಿದ ಸಂದರ್ಭ ಲಕ್ಷ್ಮೀಪಾರಾಯನವನ್ನು ಮಾಡಲಾಯ್ತು. ಆ ಬಳಿಕ ಸ್ವಾಮೀಜಿ ಗೋಪೂಜೆ ಮಾಡಲು ಸಿದ್ಧರಾದರು.
ಗೋವುಗಳಿಗೆ ಸ್ನಾನ ಮಾಡಿಸಿ ಶುದ್ಧೀಕರಿಸಲಾಯ್ತು. ಬಳಿಕ ಅವುಗಳಿಗೆ ಚಂದನ ಹಾಗೂ ಅರಶಿನವನ್ನು ಲೇಪಿಸಿಸಲಾಯ್ತು. ಹಣೆಗೆ ಸಿಂಧೂರವನ್ನು ಲೇಪಿಸಿ ಕುತ್ತಿಗೆ ಹೂವಿನ ಹಾರಗಳಿಂದ ಶೃಂಗರಿಸಲಾಯ್ತು. ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಹಸುಗಳಿಗೆ ಆರತಿ ಬೆಳಗಿ ಮಂತ್ರಪಠಣ ಮಾಡುವ ಮೂಲಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯ್ತು.
ಶುಭವತಿ ವಿ. ಪೂಜಾರಿ ಅವರ ಮನೆಯಲ್ಲಿ 8 ಹಸುಗಳಿದ್ದು ಇವುಗಳ ಪೈಕಿ ನಾಲ್ಕು ಕರುಗಳು ಸೇರಿವೆ. ಶುಭವತಿ ಅವರು ಹಸುಗಳನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅಪ್ಪಟ ಕೃಷಿಕ-ಗೃಹಿಣಿಯಾಗಿರುವ ಶುಭವತಿ ಅವರು ಸುದ್ದಿ9ನೊಂದಿಗೆ ಮಾತಾಡಿ, ನಮ್ಮ ಕೃಷಿಗೆ ಆಧಾರಸ್ಥಂಭವಾಗಿರುವ ಹಾಗೂ ನಮ್ಮನ್ನು ಹಾಲೆರೆದು ಪೋಷಿಸುವ ತಾಯಿಸಮಾನ ಹಸುಗಳನ್ನು ಗೋಪೂಜೆ ಮಾಡುವ ಮೂಲಕ ಅವುಗಳಿಗೆ ಅಭಿನಂದಿಸಿರುವುದರಿಂದ ನಮಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದ್ದಾರೆ. ಗೋಪೂಜೆ ಮನಡೆದ ಬಳಿಕ ಗೋವುಗಳಿಗೆ ಅರಶಿನ ಎಲೆಯ ಕಡುಬು ನೀಡಲಾಯ್ತು.






