ಮುಂಬೈ; 1993ರ ಬಾಂಬ್ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆರವಾಡಾ ಜೈಲ್ನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಾಲಿವುಡ್ ನಟ ಸಂಜಯ್ ದತ್ತ್ನ ಪೆರೋಲ್ ಅವಧಿಯನ್ನು ಮೂರನೇ ಬಾರಿ ವಿಸ್ತರಿಸಲಾಗಿದೆ. 
ದತ್ತ್ ಪತ್ನಿ ಮಾನ್ಯತಾ ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಇತ್ತೀಚೆಗಷ್ಟೇ ಆಕೆಗೆ ಶಸ್ತ್ರಚಿಕಿತ್ಸೆ ನಡೆದಿತ್ತು. ಮಾನ್ಯತಾಳ ಆರೈಕೆಗಾಗಿ ದತ್ತ್ನನ್ನು ಡಿಸೆಂಬರ್ 21ರಂದು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿತ್ತು. ಪೆರೋಲ್ ಅವಧಿ ಜನವರಿ 21ಕ್ಕೆ ಮುಗಿದಿದ್ದು ದತ್ತ್ ತನ್ನ ಪೆರೋಲ್ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಜೈಲ್ ಅಧಿಕಾರಿಗಳು ಫೆ.21ರವರೆಗೆ ಪೆರೋಲ್ ವಿಸ್ತರಿಸಿದ್ದರು. ಈ ಅವಧಿಯೂ ಮುಗಿಯುತ್ತಿದ್ದಂತೆ ತನ್ನ ಪತ್ನಿಗೆ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆ ನಡೆದಿದ್ದು ಆಕೆಯ ಆರೈಕೆ ಮಾಡಲು ತನ್ನ ಪೆರೋಲ್ ವಿಸ್ತರಿಸುವಂತೆ ದತ್ತ್ ಮೂರನೇ ಬಾರಿ ಜೈಲ್ ಆಡಳಿತವನ್ನು ಕೇಳಿಕೊಂಡಿದ್ದರು. ಅದರಂತೆ ಮುಂಬೈನ ಖಾರ್ ಪೊಲೀಸ್ ಠಾಣೆಯ ಅಧಿಕಾರಿಗಳು ದತ್ತ್ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಅವರ ವರದಿಯಂತೆ ದತ್ತ್ ಪೆರೋಲ್ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ.
