ಕಾಕಿನಾಡ: ಆಂಧ್ರದ ಪೂರ್ವ ಗೋದಾವರಿಯ ಕಾಕಿನಾಡದಲ್ಲಿರುವ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 20 ಮಂದಿ ಸಜೀವ ದಹನವಾಗಿದ್ದಾರೆ. ಕಾಕಿನಾಡದ ಉಪ್ಪಾಡು ಕೊತ್ತಪಲ್ಲಿ ಮಂಡಲದ ವಾಕತಿಪ್ಪದಲ್ಲಿನ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ಇಂದು ಪಟಾಕಿಯನ್ನು ತಯಾರಿಸುವ ಸಂದರ್ಭದಲ್ಲಿ ಬೆಂಕಿ ಅವಘಡ ನಡೆದಿದೆ.

ಬೆಂಕಿಯ ಕೆನ್ನಾಲಿಗೆಗೆ 20 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನುಳಿದಂತೆ 15 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಹೆಚ್ಚಿನವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾರ್ಖಾನೆಯಲ್ಲಿ ಅಪಾರ ಮಟ್ಟದಲ್ಲಿ ಪಟಾಕಿ ತಯಾರಿಕಾ ರಾಸಾಯನಿಕಗಳು ಇರುವುದರಿಂದ ಕಾರ್ಖಾನೆ ಹೊತ್ತಿ ಉರಿಯುತ್ತಿದೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕಗಳು ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪೊಲೀಸರು ಸಹ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಪಟಾಕಿ ತಯಾರಿಕಾ ಕೇಂದ್ರದಲ್ಲಿ ಸಂಭವಿಸಿದ ಬೆಂಕಿ ದುರಂತದ ಬಗ್ಗೆ ಆತಂಕ ವ್ಯಕ್ತ ಪಡಿಸಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ದುರಂತದ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದ್ದಾರೆ.
