ಕೈಕಂಬ : ಬೆಂಗಳೂರಿನಲ್ಲಿ ಮಾ. ೨೨ರಂದು ನಡೆಯಲಿರುವ ರೈತರ ಬೃಹತ್ ಚಳುವಳಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಗುರುಪುರ ವಲಯ ಸಮಿತಿ ಭಾನುವಾರ ಗಂಜಿಮಠ ಪಂಚಾಯತ್ ಸಭಾಭವನದಲ್ಲಿ `ಗುರುಪುರ ವಲಯ ರೈ ಸಮಾವೇಶ’ ಆಯೋಜಿಸಿತು. ದ ಕ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ವಾಸುದೇವ ಉಚ್ಚಿಲ್ ಮಾತನಾಡಿ, ಸ್ವಾತಂತ್ರ‍್ಯ ಹೋರಾಟದ ಬಳಿಕ ಈ ದೇಶದಲ್ಲಿ ಇದೇ ಪ್ರಥಮ ಬಾರಿಗೆ ೧೦೦ ದಿನ ಮೀರಿ ಚಳುವಳಿಯೊಂದು ನಡೆಯುತ್ತಿದೆ.
ಕೇಂದ್ರ ಸರ್ಕಾರ ತಿದ್ದುಪಡಿ ತಂದಿರುವ ಮೂರು ರೈತ ವಿರೋಧಿ ಮಸೂದೆ ರದ್ದುಪಡಿಸಲು ಆಗ್ರಹಿಸಿ ದಿಲ್ಲಿಯಲ್ಲಿ ಈಗಲೂ ಚಳುವಳಿ ನಡೆಯುತ್ತಿದೆ. ಕಾರ್ಮಿಕರ ಮೂಲ ರೈತಾಪಿ ತಳಹದಿಯಲ್ಲಿದೆ. ಹಾಗಾಗಿ ರೈತರೊಂದಿಗೆ ಕಾರ್ಮಿಕ ಸಂಘಟನೆ ಇದೆ. ಕೇಂದ್ರ ಸರ್ಕಾರವು ಬಡವರ ವಿರುದ್ಧ ದಮನಕಾರಿ ನೀತಿ ಜಾರಿಗೆ ತಂದು, `ಆಪ್ತ ಬಂಡವಾಳಶಾಹಿ’ಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಅಣಕವಾಡಿದರು.
ಸಿಐಟಿಯು ಮುಖಂಡ ಯು ಬಿ ಲೋಕಯ್ಯ ಮಾತನಾಡಿ, ಕೇಂದ್ರ ಸರ್ಕಾರವು ಜನಸಾಮಾನ್ಯರ ‘ವೈರಿ ಮಸೂದೆ’ ತಂದಿದೆ. ಕೇಂದ್ರದ ಕುರುಡು ನೀತಿಯಿಂದ ಈ ದೇಶದ ಸಂಪತ್ತು ಅದಾನಿ-ಅಂಬಾನಿ ಮತ್ತು ಕಾರ್ಪೊರೆಟ್ ಜಗತ್ತಿಗೆ ಧಾರೆಯೆರೆಯುವ ನಿಟ್ಟಿನಲ್ಲಿ ಮೋದಿ ಅತಿ ಉತ್ಸಾಹ ತೋರ್ಪಡಿಸುತ್ತಿದ್ದಾರೆ. ಇದು ‘ಆಳುವವರು ಆಳಬೇಕು’, ಬೇಡುವವರು ಬೇಡುತ್ತಲೇ ಇರಬೇಕು’ ಎಂಬ ನೀತಿಯಂತಾಗಿದ್ದು, ಖಂಡಿತವಾಗಿಯೂ ಇದು ರೈತ ಮಿತ್ರ ಸರ್ಕಾರವಲ್ಲ. ಇದು ಅಂಬಾನಿ-ಅದಾನಿ ಎದುರು ದೇಶದ ಬಡಜನತೆ ಗುಲಾಮರಾಗಬೇಕು ಎಂಬ ನೀತಿಯಾಗಿದೆ ಎಂದು ಟೀಕಿಸಿದರು.
ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಸದಾಶಿವ ದಾಸ್, ದಕ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಐಟಿಯು ಗುರುಪುರ ವಲಯ ಸಮಿತಿ ಅಧ್ಯಕ್ಷ ಗಂಗಯ್ಯ ಅಮೀನ್, ಪ್ರಗತಿಪರ ಕೃಷಿಕ ಕಾರಮೊಗುರುಗುತ್ತು ಜಿ ಕೆ ಕಿಟ್ಟಣ್ಣ ರೈಯವರು ಕೇಂದ್ರ ಸರ್ಕಾರದ ರೈತರು, ಕಾರ್ಮಿಕರ ವಿರೋಧಿ ಧೋರಣೆಗಳ ಬಗ್ಗೆ ಕುಟುಕಿದರು. ಗುರುಪುರ ವಲಯ ರೈತ ಸಂಘದ ಅಧ್ಯಕ್ಷ ಬಾಬು ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದ ನೋಣಯ್ಯ ವಂದಿಸಿದರು
