ಬಂಟ್ವಾಳ: ಪ್ರತೀ ಮನೆ ಮತ್ತು ಶಾಲೆಗಳಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗೆ ನೀರು ಮತ್ತು ಆಹಾರ ಮೀಸಲಿಡುವ ಅಗತ್ಯವಿದೆ ಎಂದು ಪಕ್ಷಿಪ್ರೇಮಿ ನಿತ್ಯಾನಂದ ಶೆಟ್ಟಿ ಬದ್ಯಾರು ಹೇಳಿದ್ದಾರೆ. ಇಲ್ಲಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ಸೋಮವಾರ ನಡೆದ ‘ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲ ಉಳಿವಿಗೆ ಸಸ್ಯರಾಶಿಗಳ ಮಹತ್ವ’ ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮುಖ್ಯಶಿಕ್ಷಕ ಅಶೋಕ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಹರೀಶ ಶೆಟ್ಟಿ ಶುಭ ಹಾರೈಸಿದರು. ಇದೇ ವೇಳೆ ಸಂವಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ನಿತ್ಯಾನಂದ ಶೆಟ್ಟಿ ಅವರು ಪುಸ್ತಕ ನೀಡಿ ಗೌರವಿಸಿದರು. ಕ್ಲಬ್ಬಿನ ಅಧ್ಯಕ್ಷ ವಿದ್ಯಾರ್ಥಿ ಡೆಲಿಶಾ ವೇಗಸ್, ಉಪಾಧ್ಯಕ್ಷ ಓಝ್ಲಿನ್ ಫೆರ್ನಾಂಡಿಸ್ ಮತ್ತಿತರರು ಇದ್ದರು. ಮುಖ್ಯಶಿಕ್ಷಕ ಅಶೋಕ್ ಕುಮಾರ್ ಸ್ವಾಗತಿಸಿ, ಇಕೋ ಕ್ಲಬ್ ಮಾರ್ಗದರ್ಶಿ ಶಿಕ್ಷಕಿ ವಿದ್ಯಾಶ್ರೀ ವಂದಿಸಿದರು. ವಿದ್ಯಾರ್ಥಿನಿ ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.
