ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ವಿಜ್ಞಾನಭವನದಲ್ಲಿ `ಶ್ರಮೇವ ಜಯತೆ’ ಯೋಜನೆಗೆ ಚಾಲನೆ ನೀಡಿದರು. ಕಾರ್ಮಿಕರ ಕಲ್ಯಾಣ ಉದ್ದೇಶ ಹೊಂದಿರುವ ಯೋಜನೆ ಇದಾಗಿದ್ದು, ಕಾರ್ಮಿಕರಿಗೆ ರಾಷ್ಟ್ರೀಯ ಆರೋಗ್ಯ ವಿಮೆ ಸೌಲಭ್ಯ ನೀಡಲಾಗಿದೆ. ಈ ಯೋಜನೆ ಭಾರತದ ಅಭಿವೃದ್ಧಿಗೆ ಪೂರಕವಾಗಲಿದೆ.

ದೇಶದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅಪಾರ. ಶ್ರಮಿಕರು ಈ ದೇಶದ ಅಮೂಲ್ಯ ಆಸ್ತಿ. ಅವರ ಬಗೆಗಿನ ನಮ್ಮ ಭಾವನೆ ಬದಲಾಗಬೇಕಿದೆ. ಬದಲಾವಣೆ ಮಾಡಲೇಬೇಕಾದ ಸಮಯ ಇದೀಗ ಬಂದಿದೆ. ಎಲ್ಲ ಶ್ರಮಿಕರ ಜೀವನ ಸುಧಾರಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು.
ದೇಶದಲ್ಲಿ ಕಾರ್ಮಿಕರಿಗೆ ಸರಿಯಾದ ಗೌರವ ಸಿಗುತ್ತಿಲ್ಲ. ಕಾರ್ಮಿಕರಿಗೆ ಪ್ರತಿಯೊಬ್ಬರು ಗೌರವ ನೀಡಬೇಕು. ವೈಟ್ ಕಾಲರ್ ಕೆಲಸ ಮಾತ್ರ ಶ್ರೇಷ್ಠ ಎನ್ನುವ ಭಾವನೆ ಮೊದಲು ಹೋಗಬೇಕು. ಎಲ್ಲ ಶ್ರಮಿಕರ ಬದುಕಿಗೂ ಭದ್ರತೆ ಸಿಗಬೇಕು. ಭಾರತೀಯರಲ್ಲಿ ಇಂಥ ಭಾವನೆ ತೊಲಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ `ಶ್ರಮವೇ ಜಯತೆ’ ಯೋಜನೆ ಜಾರಿಗೆ ತಂದಿದೆ. ಶ್ರಮಿಕರಿಗಾಗಿ `ಶ್ರಮಿಕಾ ಸುವಿಧಾ’ ಅನ್ನುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
