ಹುಲಿಗಳ ಲೈಫೇ ಹಾಗೆ…
ಸರಸವಾಡುತ್ತಾ, ಸರಸ ವಿರಸಕ್ಕೆ ತಿರುಗಿ ಪ್ರಿಯತಮನಿಂದ ಗಂಭೀರ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ಪ್ರಿಯತಮೆ ಕೊನೆಗೂ ಇಹಲೋಕ ತ್ಯಜಿಸಿದ್ದಾಳೆ. ವಾಮಂಜೂರಿನ ಬಂಟಿ(5) ಇಹಲೋಕ ತ್ಯಜಿಸಿದ ಪ್ರಿಯತಮೆ.
ವಾಮಂಜೂರಿನ ಪಿಲಿಕುಳ ನಿಸರ್ಗ ಧಾಮದಲ್ಲಿ ಪ್ರೇಮ ಮಹೋತ್ಸವ ಆಚರಿಸುತ್ತಿದ್ದ ವ್ಯಾಘ್ರಗಳಾದ ಕುಮಾರ್(7) ಹಾಗೂ ಬಂಟಿ(5) ಇಬ್ಬರ ಸರಸವೂ ಕೊನೆಗೆ ವಿರಸಕ್ಕೆ ತಿರುಗಿ ಕುಮಾರ್ ಬಂಟಿಯನ್ನು ಪ್ರೀತಿಯಲ್ಲಿ ಬಲವಾಗಿ ಕಚ್ಚಿದ ಪರಿಣಾಮ ಬಂಟಿ ಸಾವನ್ನಪ್ಪಿದ್ದಾಳೆ.
ಹಲ್ಲೆಗೊಳಗಾಗಿದ್ದ ಬಂಟಿಯನ್ನು ರಕ್ಷಿಸಲು ವೈದ್ಯರು ನಿರಂತರವಾಗಿ ಪ್ರಯತ್ನಿಸಿದರೂ ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 12 ಗಂಟೆಗೆ ಪ್ರಾಣ ತ್ಯಜಿಸಿತ್ತು. ಅದರ ಅಂತ್ಯಸಂಸ್ಕಾರ ಮಂಗಳವಾರ ಬೆಳಿಗ್ಗೆ ನಡೆಸಲಾಯ್ತು. ಬಂಟಿಯ ಕೊಲೆಗೆ ಕಾರಣನಾದ ಕುಮಾರ ಯಾವುದೇ ಗೊಡವೆಯೇ ಇಲ್ಲದೆ, ಸುತ್ತಾಡುತ್ತಿದ್ದಾನೆ. ಯಾರನ್ನೋ ಕಳೆದುಕೊಂಡಂತೆ ವರ್ತಿಸುತ್ತಿರುವ ಕುಮಾರ ಯಾವುದೋ ರೀತಿಯಲ್ಲಿ ಮಂಕು ಕವಿದಂತೆ ವರ್ತಿಸುತ್ತಿದ್ದಾನೆ.
ಹುಲಿಗಳದ್ದು ಜೀವನವೇ ಅಂಥದ್ದು:
ಹುಲಿ ಎಂಬುದು ಫೆಲಿಸಿ ಟೈಗ್ರಿಸ್ ಎಂಬ ವಂಶಕ್ಕೆ ಸೇರಿದ್ದು. ಈಜಟಜಚಿಜ ಎಂಬ ಕುಟುಂಬ ವರ್ಗಕ್ಕೆ ಸೇರಿರುವ ಹುಲಿ, ಚಿರತೆ, ಸಿಂಹ ಹಾಗೂ ಬೆಕ್ಕುಗಳ ವರ್ತನೆ ಸಾಮಾನ್ಯವಾಗಿ ಒಂದೇ ರೀತಿಯಲ್ಲಿ ಬರುತ್ತದೆ. ಸಾಮಾನ್ಯವಾಗಿ ಜೀವಶಾಸ್ತ್ರೀಯವಾಗಿ ಕ್ಯಾಟ್ ಎಂದೇ ಕರೆಯಲಾಗುತ್ತದೆ. ಭಾರತದಲ್ಲಿ ಈ ಹಿಂದೆ 9 ಜಾತಿಯ ಹುಲಿಗಳಿತ್ತು. ಅವುಗಳಲ್ಲಿ ಮೂರು ಜಾತಿಯ ತಳಿಗಳು ಸಂಪೂರ್ಣವಾಗಿ ನಾಶಗೊಂಡಿದೆ. ಈಗ ಆರು ಜಾತಿಯ ತಳಿಗಳು ಮಾತ್ರ ಇವೆ ಎಂಬುದೇ ಸಮಧಾನಕರ ವಿಷಯ.
ಹುಲಿಗಳ ಜೀವನ ಕ್ರಮವನ್ನು ಸರಿಯಾಗಿ ಅಭ್ಯಸಿಸಿದರೆ ಹುಲಿಗಳು ಸಿಟ್ಟಿಗೇಳುವುದರ ವರ್ತನೆ ನಮಗೆ ಸಾಮಾನ್ಯ ಎಂಬಂತೆ ಕಂಡುಬರುತ್ತದೆ. ಈ ಹಿಂದೆ ಸರ್ವ ವ್ಯಾಪಿಯಾಗಿದ್ದ ಹುಲಿಗಳು ರಕ್ಷಿತಾರಣ್ಯ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಅಲ್ಲದೆ ರಕ್ಷಿತಾರಣ್ಯದಲ್ಲಿ ಇರುವ ಹುಲಿಗಳ ಬಗ್ಗೆ ಸರಕಾರಕ್ಕೆ ನಿಖರವಾದ ಲೆಕ್ಕಗಳಿಲ್ಲ. ಹುಲಿಗಳು ಒಂದಲ್ಲಾ ಒಂದು ರೀತಿಯಲ್ಲಿ ನಾಶವಾಗುತ್ತಲೇ ಇದೆ. ಉಲ್ಲಾಸ್ ಕಾರಂತ್ ಅವರು ಹುಲ ರಕ್ಷಣೆಗಾಗಿ ಹೋರಾಡಿದ್ದನ್ನು ಬಿಟ್ಟರೆ ಉಳಿದವರ್ಯಾರೂ ಹುಲಿಗಳ ಬಗ್ಗೆ ಗಂಭೀರವಾಗಿ ಚಿಂತಿಸಿಲ್ಲ. ಅವರು ಹುಲಿಗಳಿಗೆ ರೆಡಿಯೋ ಕಾಲರ್ ಧರಿಸಿ ಅವುಗಳನ್ನು ಅಭ್ಯಸಿಸುವ ಪ್ರಯತ್ನ ನಡೆಸಿದರಾದರೂ, ಅವರಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಇದನ್ನು ಅವರು ತನ್ನ ಕೃತಿಯಾದ ಹುಲಿರಾಯನ ಆಕಾಶವಾಣಿ ಕೃತಿಯಲ್ಲಿ ವಿವರಿಸಿದ್ದಾರೆ.

ಪಿಲಿಕುಳಲ್ಲಿರುವ ನಿಸರ್ಗ ಧಾಮ ಹುಲಿಗಳಿಗೆ ಸ್ವಚ್ಛಂದವಾಗಿ ಜೀವನ ನಡೆಸಲು ಪೂರಕವಾಗಿಲ್ಲ. ಪಿಲಿಕುಳ ಎಂಬುದು ಕೇವ ಮ್ಯೂಸಿಯಂ ಮಾತ್ರ. ಇದರಲ್ಲಿ ಅವುಗಳು ಕೃತಕ ಜೀವನವನ್ನು ನಡೆಸುತ್ತವೆ. ಕೃತಕ ಜೀವನದಿಂದ ಬೇಜಾರಾಗಿ ಕೆಲವೊಮ್ಮೆ ವ್ಯಘ್ರವಾಗಿ ವರ್ತಿಸುತ್ತದೆ. ಸ್ವಚ್ಛಂದವಾಗಿ ವಿಹರಿಸುತ್ತಾ ಬೇಟೆಯಾಡುತ್ತಾ, ತನ್ನ ಸರಹದ್ದಿನಲ್ಲಿ ವಾಸಬೇಕಾಗಿದ್ದ ಹುಲಿಗಳು ಮನುಷ್ಯರನ್ನು ಕಂಡೂ ಕಂಡೂ ಸಹಜವಾಗಿ ಅಸಂತೋಷ, ದುಃಖದಲ್ಲಿ ವರ್ತಿಸುತ್ತಾ ಇರುತ್ತದೆ. ಯಾಕೆಂದರೆ ಹುಲಿಗಳು ಮನುಷ್ಯರನ್ನು ಕಂಡು ದೂರ ಓಡುವ ಪ್ರಾಣಿಗಳು.
ಹುಲಿಗಳಿಗೆ ಅಡಲು ದಟ್ಟವಾದ ನೆರಳುಳ್ಳ ಪ್ರದೇಶ. ಸಾಕಷ್ಟು ನೀರು, ಆಹಾರದ ಲಭ್ಯತೆ ಅವಶ್ಯಕವಾಗಿರುತ್ತದೆ. ಸಾಮಾನ್ಯವಾಗಿ ಹುಲ್ಲುಗಾವಲು ಪ್ರದೇಶವಿರುವ ಕಾಡಲ್ಲಿ ವಾಸಿಸುತ್ತದೆ. ಯಾಕೆಂದರೆ ಹುಲ್ಲುಗಾವಲಿನಲ್ಲಿ ಸಸ್ಯಾಹಾರಿ ಪ್ರಾಣಿಗಳಾದ ಜಿಂಕೆ, ಕಡವೆ, ಹಸುಗಳಂತ ಪ್ರಾಣಿಗಳಿರುವುದರಿಂದ ಅವುಗಳನ್ನು ಬೇಟೆಯಾಡಿ ಜೀವನ ನಡೆಸುತ್ತದೆ. ಇಂಥಹಾ ಸ್ವಚ್ಚಂದ ಪ್ರದೇದ ಎಲ್ಲಡೆ ಇದ್ದರೂ ಮನುಷ್ಯರ ಹಸ್ತಕ್ಷೇಪದಿಂದ ಹುಲಿಗಳಿಗೆ ಈ ತಾಣಗಳು ಸುರಕ್ಷಿತವಾಗಿಲ್ಲ. ಅಲ್ಲದೆ ಅವುಗಳಿಗೆ ಬೇಟೆಯಾಡಲು ಜಿಂಕೆ, ಹಸು, ಮೊಲಗಳಂಥಾ ಪ್ರಾಣಿಗಳು ನಶಿಸುತ್ತಿರುವುದರಿಂದ ಆಹಾರದ ಲಭ್ಯತೆ ಇಲ್ಲದೆ ಸಂತತಿಗಳು ನಿಧಾನವಾಗಿ ನಶಿಸುತ್ತಾ ಸಾಗುತ್ತಿವೆ..
ಒಂಟಿ ಜೀವಿ, ಸರಹದ್ದಿನಲ್ಲಿ ವಾಸಿಸುತ್ತವೆ ಹುಲಿಗಳು:
ಹುಲಿಗಳು ಮುಖ್ಯವಾಗಿ ಒಂಟಿ ಜೀವಿಗಳು. ಗಂಡಾಗಲಿ ಅಥವಾ ಹೆಣ್ಣಾಗಲಿ ತನ್ನ ಸರಹದ್ದಿನಲ್ಲಿ ಮಾತ್ರಜೀವಿಸುತ್ತದೆ. ಆದರೆ ಮ್ಯೂಸಿಯಂಗಳಲ್ಲಿ ಹುಲಿಗಳನ್ನು ಒಟ್ಟಾಗಿ ಇಡುವುದರಿಂದ ಅವುಗಳು ಕೆರಳುವುದು, ಕೊಲ್ಲುವುದು ಸಾಮಾನ್ಯ ವಿಷಯ.
ಹೆಣ್ಣು ಹುಲಿಗಳು ತನ್ನ ಮರಿಗಳ ಜೊತೆಯಲ್ಲಿ ವಾಸುತ್ತವೆ. ಹುಲಿಗಳ ಮೂತ್ರದಲ್ಲಿ ಫೆರಮೋನ್ ಎಂಬ ರಾಯಾಯನಿಕವಿರುತ್ತದೆ. ಮರಗಿಡಳ ಮೇಲೆ ಫೆರಮೋನ್ ಮಿಶ್ರಿತ ಮೂತ್ರವನ್ನು ಮರಗಿಡಳ ಮೇಲೆ ಸಿಂಪಡಿಸಿ ಉಗುರಿನಿಂದ ಗೀರಿ ತನ್ನ ವಾಸಸ್ಥಾನ ಸೂಚಿಸುತ್ತದೆ. ಇದು ಅದರ ಸರಹದ್ದು. ಈ ಸರಹದ್ದಿಗೆ ಬೇರೆ ಹುಲಿಗಳು ಬರುವುದನ್ನು ಆ ಹುಲಿಗಳು ಬರುವುದನ್ನು ಸಹಿಸುವುದಿಲ್ಲ. ಒಂದು ವೇಳೆ ಬೇರೆ ಹುಲಿಗಳು ಬಂದರೆ ಎರಡು ಹುಲಿಗಳ ಮಧ್ಯೆ ಘೋರ ಯುದ್ಧ ನಡೆದು ಅದರಲ್ಲಿ ಒಂದು ಹುಲಿ ಅಸುನೀಗುತ್ತದೆ.
ಇನ್ನು ಸರಸವಾಡುವ ಸಂದರ್ಭದಲ್ಲೂ ಸಹ ಹುಲಿಗಳು ಸ್ವಲ್ಪ ರೊಮಾನ್ಸ್ ಮಾಡುತ್ತದೆ. ಕೆಲವೊಮ್ಮೆ ಈ ರೊಮಾನ್ಸ್ ಗಲಾಟೆಯಾಗುವ ಸಂದರ್ಭವೂ ಉಂಟು. ಹೆಣ್ಣು ಹುಲಿ ಗಂಡಿಗೆ ಮಿಲನ ಮಾಡಲು ಅವಕಾಶ ಕೊಡದಿದ್ದರೆ ಕಾಮದಿಂದ ಕೆರಳುವ ಹುಲಿ ತನ್ನ ಪ್ರಿಯತೆಮೆಯನ್ನು ಒಲಿಸುವಾಗಿ ಮೃದುವಾಗಿ ಕಚ್ಚುತ್ತದೆ. ಕೆಲವೊಮ್ಮೆ ಕಚ್ಚುವುದು ಬಲವಾದರೆ ಹೆಣೂ ಹುಲಿ ಗಾಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದೊಂದು ಪ್ರಕೃತಿಯ ತೀರಾ ಸಹಜ ವರ್ತನೆ.
ಬೇಟೆಯಾಡಲು ಬೇಕಾಗಿ ಅದರ ಅದರ ಕಾಲುಗಳಲ್ಲಿ ಮೆತ್ತನೆಯದಾದ ರಚನೆ ಇದೆ. ಹುಲಿಗಳು ಬೇಟೆಯಾಡುವಾಗ ಸದ್ದುಬರದ ರೀತಿಯಲ್ಲಿ ಇದರಿಂದ ಸಹಾಯವಾಗುತ್ತದೆ. ಹುಲಿಗಳು ಮೆಲ್ಲನೆ ಹೊಂಚುಹಾಕಿ ಬೇಟೆಯಾಡುತ್ತದೆ. ಒಂದೇ ಪ್ರಾಣಿಯ ಮೇಲೆ ಗಮನ ಕೇಂದ್ರೀಕರಿಸಿ ಅದನ್ನೇ ಹಿಡಿಯುತ್ತದೆ. ತನ್ನ ಮುಂಗಾಲಿನಿಂದ ತನ್ನ ಬೇಟೆಯನ್ನು ಹಿಡಿದು, ಅದರ ಕತ್ತಿಗೆ ಬಾಯಿ ಹಾಕಿ ತಿನ್ನುತ್ತದೆ. ದೊಡ್ಡ ಪ್ರಾಣಿ ಸಿಕ್ಕರೆ ಎರಡು ವಾರ ಬೇಟೆಯ ಅವಶ್ಯಕತೆ ಇರುವುದಿಲ್ಲ. ಕೆಲವೊಮ್ಮೆ ಹುಲಿಗಳು ತನ್ನ ಆಹಾರವನ್ನು ಬೇರೆ ಪ್ರಾಣಿಗಳಿಗೆ ಹಂಚುವುದು ಸಾಮಾನ್ಯ. ಆದರೆ ವಿಚಿತ್ರವೆಂದರೆ ತನಗೆ ಸಿಕ್ಕ ಆಹಾರವನ್ನು ನರಿ, ತೋಳಗಳಂಥಾ ಪ್ರಾಣಿಗಳೇ ಕಬಳಿಸುವುದೇ ಹೆಚ್ಚು.
ಎರಡರಿಂದ ಮೂರ ವರ್ಷದ ಬಳಿಕ ಪ್ರಬುದ್ಧವಾಗುವ ಹುಲಿಗಳು ಲೈಂಗಿಕ ಸಾಮರ್ಥ್ಯವನ್ನು ಪಡೆದು ಹೆಣ್ಣಿಗಾಗಿ ಹುಡುಕಾಟ ನಡೆಸುತ್ತದೆ. ಗಂಡು ಹುಲಿ ಫೆರಮೋನ್ ರಾಸಾಯನಿಕದಿಂದ ಹೆಣ್ಣುಹುಲಿಯನ್ನು ಹುಡುಕಾಡಿ ಅದರೊಂದಿಗೆ ಜೀವನ ನಡೆಸುತ್ತದೆ. 100 ದಿನಗಳ ಅಂತರದಲ್ಲಿ ಹೆಣ್ಣು ಮೂರರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತದೆ.
ಮರಿಗಳಿಗೆ ಜನ್ಮ ನಿಡಿದ ಬಳಿಕ ಹೆಣ್ಣು ಹುಲಿಯ ವರ್ತನೆಯೇ ಬದಲಾಗುತ್ತದೆ. ವ್ಯಾಘ್ರ ವ್ಯಘ್ರವಾಗುತ್ತದೆ. ತನ್ನ ಪ್ರದೇಶಕ್ಕೆ ಯಾವ ಹುಲಿಯನ್ನೂ ಬರಲು ಬಿಡುವುದಿಲ್ಲ. ಬಂದರೆ ಅವುಗಳ ಮೇಲೆ ದಾಳಿ ನಡೆಸುತ್ತದೆ. ತನ್ನ ಮರಿಗಳ ರಕ್ಷಣೆಗೆ ಈ ರೀತಿಯಾಗಿ ವರ್ತಿಸುತ್ತದೆ.
ಮನುಷ್ಯರನ್ನು ಕಂಡು ದೂರ ಓಡುವ ಹುಲಿಗಳು:
ಮನುಷ್ಯರಾದ ನಾವು ಹಲಿಗಳನ್ನು ಕಂಡು ದೂರ ಓಡುತ್ತೇವೆ. ಆದರೆ ಅಸಲಿ ವಿಷಯ ಬೇರೆಯೇ ಆಗಿದೆ. ಯಾಕೆಂದರೆ ಹುಲಿಗಳು ಮನುಷ್ಯರನ್ನು ಕಂಡ ಕೂಡಲೇ ಅಲ್ಲಿಂದ ತಪ್ಪಿಸಿಕೊಳ್ಳುತ್ತದೆ. ಹೆಣ್ಣು ಹುಲಿಗಳು ತನ್ನ ಮರಿಗಳಿದ್ದರೆ ಮಾತ್ರ ಆ ಪ್ರದೇಶಕ್ಕೆ ಮನುಷ್ಯ ಬಂದರೆ ದಾಳಿ ನಡೆಸಿ ಕೊಲ್ಲುತ್ತದೆ. ಮುಖ್ಯವಾಗಿ ಮನುಷ್ಯ ಹುಲಿಗಳ ಆಹಾರವೇ ಅಲ್ಲ. ಮನುಷ್ಯರ ರಕ್ತದ ರುಚಿ ಕೂಡಾ ಅದಕ್ಕೆ ಹಿಡಿಸುವುದಿಲ್ಲ.
ನರಭಕ್ಷಕಗಳಾಗುವುದು ಯಾಕೆ?
ಹುಲಿಗಳು ನರಭಕ್ಷಕ ಆಗುವುದು ಒಂದು ವಿಚಿತ್ರ. ಮುಖ್ಯವಾಗಿ ಗಾಯಗೊಂಡ ಹುಲಿಗಳು, ಆಹಾರ ಹುಡುಕಲಾರದ ಅಶಕ್ತ ಹುಲಿಗಳು ಮನುಷ್ಯರನ್ನು ಕೊಲ್ಲುತ್ತದೆ. ದೇಹದಲ್ಲಿ ಗಾಯಗಳಿದ್ದರೆ, ಅವುಗಳಿಗೆ ಮಾರಣಾಂತಿಕ ರೋಗ ಬಂದು ಬೇರೆ ಪ್ರಾಣಿಗಳನ್ನು ಬೇಟೆಯಾಡಲು ಅಸಾಧ್ಯವಾದರೆ ಮಾತ್ರ ನರಭಕ್ಷಕಗಳಾಗುತ್ತವೆ.
ಅಯೋಗ್ಯ ವನ್ಯಧಾಮ:
ಪಿಲಿಕುಳದ ಡಾ| ಶಿವರಾಮ ಕಾರಂತ ವನ್ಯಧಾಮ ಹುಲಿಗಳಿಗೆ ವಾಸವಾಗಿರಲು ಅಯೋಗ್ಯ ವನ್ಯಧಾಮದಂತೆ ಕಾಣುತ್ತದೆ. ಹುಲಿಗಳು ಸ್ವಚ್ಛಂದವಾಗಿ ವಿಹರಿಸಲು ಜಾಗ ಸ್ವಲ್ಪವೂ ಸಾಕಾಗುವುದಿಲ್ಲ. ದಿನನಿತ್ಯ ಮನುಷ್ಯರನ್ನು ನೋಡಿ ನೋಡಿ ಸಾಕಾದ ಹುಲಿಗಳು ತನ್ನ ಮೂಲತ್ವವನ್ನು ಬದಲಿಸಿದೆ. ಈ ವನ್ಯಧಾಮದಲ್ಲಿ ಅಕೇಶಿಯಾ ಮರಗಳೇ ಹೆಚ್ಚು. ಪ್ರಕೃತಿಯಲ್ಲಿ ಚಂಘನೆ ಜಿಗಿದು ಮಾಯವಾಗುವ ಹುಲಿಗಳ ವರ್ತನೆ ಪಿಲಕುಳದಲ್ಲಿರುವ ಹುಲಿಗಳಲ್ಲಿ ಕಂಡುಬರುವುದಿಲ್ಲ. ಇಲ್ಲಿನ ಹುಲಿಗಳನ್ನು ಕಂಡು ಹುಲಿ ಎಂದರೆ ಇವುಗಳೇ ಎಂದು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಮಾನಸಿಕವಾಗಿ ಕುಗ್ಗಿರುವ ಹುಲಿಗಳು ವರ್ತನೆಯಲ್ಲಿ ವ್ಯಘ್ರವಾಗಿರುವುದನ್ನು ನೋಡಬಹುದು.
ಪಶ್ಚಿಮ ಘಟ್ಟ ಹುಲಿಗಳಿಗೆ ವಾಸಯೋಗ್ಯ ಪ್ರದೇಶ. ಹೆಬ್ರಿಯಲ್ಲಿ ಹುಲಿಯೋಜನೆ ಎಂಬುದು ನೆನೆಗುದಿಗೆ ಬಿದ್ದಿದೆ. ನಮ್ಮ ರಾಷ್ಟ್ರ ಪ್ರಾಣಿ ಸ್ವಚ್ಚಂದವಾಗಿ ಬದುಕಬೇಕಾದರೆ ಹೆಬ್ರಿಯಲ್ಲಿ ಸರಕಾರ ಹುಲಿಯೋಜನೆಯನ್ನು ಸರಕಾರ ಯಾರಿಗೂ ತೊಂದರೆಯಾಗದ ರೀತಿಯಲ್ಲು ಜಾರಿಗೊಳಿಸುವುದು ಅಗತ್ಯ. ಪ್ರಾಣಿಗಳ ಮೇಲೆ ಪ್ರೀತಿ ಇದ್ದರೆ ನಾವು ಸ್ವಲ್ಪ ತ್ಯಾಗ ಮಾಡುವುದು ಅಗತ್ಯವಿದೆ.
ಗಿರೀಶ್ ಮಳಲಿ




