Published On: Thu, Oct 1st, 2020

*ಗಾಂಧಿ ಜಯಂತಿ ಸ್ವಚ್ಚ ಭಾರತಕ್ಕೆ ನಾಂದಿಯಾಗಲಿ* 

ನಾವೆಲ್ಲರೂ ಮಹಾತ್ಮ ಗಾಂಧೀಜಿಯವರ ನೂರೈವತ್ತನೇ ಜಯಂತಿಯನ್ನು ಆಚರಿಸಲಿದ್ದೇವೆ. ಬಾಪೂಜಿ ಕಂಡಿದ್ದ ಸ್ವಚ್ಛ ಭಾರತದ ಕನಸು ನನಸಾಗಬೇಕು.ನಮ್ಮ ಗಲ್ಲಿ,ನಮ್ಮ ಬೀದಿ,ನಮ್ಮ ಮೊಹಲ್ಲಾ,ನಮ್ಮ ಶಾಲೆ,ನಮ್ಮ ಊರು ಸ್ವಚ್ಛತೆಯಿಂದ ಕಂಗೊಳಿಸಬೇಕು.ಅದಕ್ಕಾಗಿ ರಾಷ್ಟ್ರದ ಪ್ರಜೆಗಳೆಲ್ಲರೂ ಕನಿಷ್ಟ ವಾರಕ್ಕೆ ಎರಡು ಗಂಟೆಗಳನ್ನಾದರೂ ಸ್ವಚ್ಛ ಭಾರತಕ್ಕಾಗಿ ಮೀಸಲಿಡಬೇಕೆಂದು ಪ್ರಧಾನಿಯವರ ಆಶಯವಾಗಿದೆ.IMG-20201001-WA0016
ಕೇವಲ ಮಾತಿನಲ್ಲಿ ಹೇಳದೇ  ಗಾಂಧಿ ಜಯಂತಿಯಂದು ತಾವೇ ಮೊದಲಿಗರಾಗಿ ಪೊರಕೆ ಹಿಡಿದು ಕಸಗೂಡಿಸಿದ್ದರು.ಈ ಸ್ವಚ್ಛತಾ ಅಭಿಯಾನವನ್ನು ಮುಂದುವರೆಸಿಕೊಂಡು ಹೋಗಿ ಸ್ವಚ್ಛ,ಸಮೃದ್ಧ ಭಾರತಕ್ಕೆ ಕಾರಣರಾಗಬೇಕಾದವರು ಈ ದೇಶದ ಶ್ರೀಸಾಮಾನ್ಯ ಪ್ರಜೆಗಳು ಸಾಮಾನ್ಯ ಮನುಷ್ಯನಿಂದ ಹಿಡಿದು ರಾಷ್ಟ್ರಪತಿಯವರೆಗೂ ಎಲ್ಲರ ಮೇಲೂ ಸ್ವಚ್ಛ ಭಾರತದ ಹೊಣೆಗಾರಿಕೆ ಇದೆ.ಆದರೆ ಪ್ರಧಾನಿ ಕರೆಕೊಟ್ಟ ನಂತರದ ಕೆಲವು ತಿಂಗಳುಗಳ ಕಾಲ ಜನರಲ್ಲಿ ಈ ಸ್ವಚ್ಛ ಭಾರತದ ಉತ್ಸಾಹ ಇತ್ತೇ ವಿನ: ಅದು ನಮ್ಮ ದೈನಂದಿನ ಚಟುವಟಿಕೆಯ ಒಂದು ಭಾಗವಾಗಲೇ ಇಲ್ಲ.ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನಾವು ಸ್ವಚ್ಛವಾಗಿಟ್ಟುಕೊಂಡರೂ ಸಾಕು. ಅದೇ ದೇಶ ಸೇವೆಯಾಗಿದೆ.
ಒಂದು ಕಡೆ ಪ್ರಧಾನಿ ಸ್ವಚ್ಛ ಭಾರತಕ್ಕೆ ಕರೆಕೊಟ್ಟಿದ್ದಾರೆ.ಇನ್ನೊಂದು ಕಡೆ ನಾವು ಕಂಡ ಕಂಡಲ್ಲಿ ಉಗುಳುತ್ತಲೇ ಇದ್ದೇವೆ.ಅಂಗಡಿಯಲ್ಲಿ ಬಾಳೆಹಣ್ಣು ತಿಂದು ಸಿಪ್ಪೆಯನ್ನು ರಸ್ತೆಗೆ ಎಸೆಯುತ್ತಲೇ ಇದ್ದೇವೆ.ಬಸ್ ನಲ್ಲೇ ಕುಳಿತೊಂಡು ಚಿಪ್ಸ್ ತಿಂದು ಪ್ಯಾಕೆಟ್ ಅನ್ನು ಕಿಟಕಿಯಿಂದ ಕೆಳಗೆ ನಿಲ್ದಾಣಕ್ಕೆ ಎಸೆಯುತ್ತಲೇ ಇದ್ದೇವೆ.ಹೇಗಿದ್ದರೂ ನಗರಸಭೆಯ ಕಾರ್ಮಿಕರು ಅದನ್ನು ಸ್ವಚ್ಛಗೊಳಿಸಲಿಕ್ಕಾಗಿಯೇ ಇದ್ದಾರಲ್ಲ ಎಂಬ ಭಾವನೆ ನಮ್ಮದು`ಸ್ವಚ್ಛತೆ ಕಾಪಾಡಿ’ ಎಂದು ಬರೆದಿದ್ದರೂ ಕಡ್ಲೆಕಾಯಿ ತಿಂದು ಸಿಪ್ಪೆಯನ್ನು ಬಸ್ ನೊಳಗೇ ಹಾಕುವ ಜನರು ಹಲವರಿದ್ದಾರೆ.ಎಲ್ಲರಿಗೂ ಕಾಣುವಂತೆ ‘ಸ್ವಚ್ಛತೆ ಕಾಪಾಡಿ’ ಎಂದು ಎಲ್ಲಾ ಸಾರ್ವಜನಿಕ ಶೌಚಾಲಯಗಳಲ್ಲಿ ಬರೆದಿದ್ದರೂ ಇನ್ನೂ ಅಲ್ಲಿನ ಗೋಡೆಗಳ ಮೇಲೆ ಬಾಯಿಗೆ ಬಂದದ್ದನ್ನು ಗೀಚುವ ಜನರು ಅನೇಕರಿದ್ದಾರೆ.ಇವೆಲ್ಲ ತುಂಬಾ ಸಣ್ಣ ಸಂಗತಿಗಳು ಅಂತ ನಮಗೆ ಅನ್ನಿಸಬಹುದು.ಆದರೆ ನಿಜವಾಗಿಯೂ ಸ್ವಚ್ಚಭಾರತ ಅಭಿಯಾನ ಯಶಸ್ವಿಯಾಗಬೇಕಾದರೆ ಇಂಥಹ ಸಣ್ಣ ಸಣ್ಣ ವಿಷಯಗಳಿಂದಲೇ ಸ್ವಚ್ಛತೆ ಆರಂಭವಾಗಬೇಕು.
 *ಸ್ವಚ್ಛತೆ ಎನ್ನುವುದು ಮೊದಲು ನಮ್ಮ ಮನಸ್ಸಿನಲ್ಲಿ  ಬರಲಿ* 
.ಬಸ್ ನಿಲ್ದಾಣಗಳಲ್ಲಿ ಚಿಪ್ಸ್ ಪ್ಯಾಕೆಟ್ ಎಸೆಯುವ ಮುನ್ನ,ಶೌಚಾಲಯದ ಗೋಡೆಗಳ ಮೇಲೆ ಗೀಚುವ ಮುನ್ನ,ರಸ್ತೆ ಬದಿ ಮೂತ್ರವಿಸರ್ಜನೆ ಮಾಡುವ ಮುನ್ನ,ಕಂಡ ಕಂಡಲ್ಲಿ ಎಂಜಲು ತುಪ್ಪುವ ಮುನ್ನ,ಮನೆಯ ಕಸವನ್ನು ಇನ್ನೊಂದು ಬೀದಿಗೆ ತೆರಳಿ ರಸ್ತೆ ಪಕ್ಕದಲ್ಲಿ ಸುರಿಯುವ ಮುನ್ನ ನಾವು ಸ್ವಲ್ಪ ಆಲೋಚಿಸುವಂತಾದರೆ ಸ್ವಚ್ಛ ಭಾರತ ಯೋಜನೆ ಯಶಸ್ವಿಯಾಗುವುದರಲ್ಲಿ ಯಾವುದೇ ಕಷ್ಟವಿಲ್ಲ.ನಾನು ಮಾಡುತ್ತಿರುವುದು ಸರಿಯಿದೆಯಾ?ಇದರಿಂದ ಪರಿಸರದ ಸ್ವಚ್ಛತೆ ನಾಶವಾಗುವುದಿಲ್ಲವೇ?ದೇಶದ ಪ್ರಜೆಯಾಗಿ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನನ್ನ ಕರ್ತವ್ಯವಲ್ಲವೇ?ಇಂಥ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಎದ್ದರೆ ಕಂಡ ಕಂಡಲ್ಲಿ ಗಲೀಜು ಮಾಡುವ ಮುನ್ನ ನಾವು ಹಲವು ಬಾರಿ ಯೋಚಿಸುತ್ತೇವೆ.
ಸಿಂಗಾಪುರವನ್ನು ಜಗತ್ತಿನ ಅತೀ ಸುಂದರ,ಸ್ವಚ್ಛ ದೇಶ ಎಂದು ಕರೆಯುತ್ತಾರೆ.ಆ ದೇಶ ಅಷ್ಟು ಸ್ವಚ್ಛವಾಗಿರಲು ಯಾವನೋ ದೇವಪುರುಷ ಕಾರಣನಲ್ಲ.ಅಲ್ಲಿನ ಪ್ರಜೆಗಳೇ ಕಾರಣ.ಸ್ವಚ್ಛತೆ ಎನ್ನುವುದು ಅಲ್ಲಿನ ಜನರ ಮೈಮನಗಳಲ್ಲಿ ಹಾಸುಹೊಕ್ಕಾಗಿದೆ.ಅದೇ ರೀತಿ ನಮ್ಮ ಮೇಘಾಲಯದ ಮಾವ್ಲೀoಗ್ ಹಳ್ಳಿ ಏಷ್ಯಾದಲ್ಲಿ ಅತೀ ಸ್ವಚ್ಚ ಹಳ್ಳಿಯಾಗಿದೆ. ಇದಕ್ಕೆ ಕಾರಣ ಅಲ್ಲಿನ ಪ್ರಜೆಗಳು ಹೀಗಾಗಿ ನಾವು ಮನಸ್ಸು ಮಾಡಿದರೆ ನಮ್ಮ ದೇಶವನ್ನು ಅತ್ಯಂತ – ಸ್ವಚ್ಚ ದೇಶವಾಗಿ ಮಾಡಲು ಸಾಧ್ಯವಿದೆ.
ಮೊದಮೊದಲು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು,ನಾವು ಓಡಾಡುವ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಶುಚಿಯಾಗಿಟ್ಟುಕೊಳ್ಳುವುದು ತುಸು ಕಠಿಣವಾಗಬಹುದು.ಆದರೆ ದಿನಗಳು ಕಳೆದಂತೆ,ಪ್ರತಿ ದಿನವೂ ನಾವು ಸ್ವಚ್ಛತೆ ಕಾಪಾಡಿಕೊಂಡು ಬಂದರೆ ಅದು ನಮಗೇ ಅರಿವಿಲ್ಲದಂತೆ ನಮ್ಮ ಜೀವನದ ಒಂದು ಭಾಗವಾಗಿ ಬಿಡುತ್ತದೆ.ಆಗ ನಮಗೇ ಅರಿವಿಲ್ಲದಂತೆ ಚಿಪ್ಸ್ ಪ್ಯಾಕೆಟ್ ಅನ್ನು ರಸ್ತೆಗೆ ಎಸೆಯುವ ಬದಲು ಕಸದ ಬುಟ್ಟಿಗೆ ಹಾಕುತ್ತೇವೆ.
ಪ್ರಧಾನಿಯವರು ಬಂದು ಕಸ ಗುಡಿಸಲಿ ಎಂದು ನಾವು ಪ್ರತೀ ಬಾರಿಯೂ ನಿರೀಕ್ಷೆ ಮಾಡಿದರೆ ಅದು ನಮ್ಮ ಮೂರ್ಖತನವಾಗುತ್ತದಷ್ಟೇ.ಅವರು ಈ ದೇಶದ ಎಲ್ಲ ಪ್ರಜೆಗಳ ಪ್ರತಿನಿಧಿಯಾಗಿ ಸ್ವಚ್ಛ ಭಾರತಕ್ಕೆ ಕರೆಕೊಟ್ಟಿದ್ದಾರೆ.ಮತ್ತು ಅವಕಾಶ ಸಿಕ್ಕಾಗಲೆಲ್ಲ ಅದರಲ್ಲಿ ಭಾಗಿಯಾಗಿದ್ದಾರೆ ಕೂಡಾ.ಅವರ ಕನಸನ್ನು ಮತ್ತು ಬಾಪೂಜಿಯ ಕನಸನ್ನು ನಿಜವಾಗಿಸುವುದು ನಮ್ಮ ಕೈಯಲ್ಲಿದೆಯಷ್ಟೇ.ನಮ್ಮ ದೇಶ ಸ್ವಚ್ಛವಾಗಿದ್ದರೆ ಅದರಿಂದ ಲಾಭ ನಮಗೇ ಹೊರತು ಮತ್ಯಾರಿಗೂ ಅಲ್ಲ.ಕರೋನಾದ ಈ ಸಮಯದಲ್ಲಿ ಸ್ವಚ್ಚ ಪರಿಸರ ನಿಮಾ೯ಣ ಮಾಡದಿದ್ದರೆ ಮಾನವ ಜನ್ಮಕ್ಕೆ ಸಂಚಕಾರ ಬರಲಿದೆ ಎಂಬುದು ತಜ್ಞರ ಮಾತು.ವಿದೇಶದಲ್ಲಿ ಜಾರಿಗೆ ಬಂದಿರುವ ಕಠಿಣ ಕಾನೂನು ನಮ್ಮಲ್ಲಿಯೂ ಬರಬೇಕಾಗಿದೆ.ಪ್ರತಿ ಪ್ರಜೆಯೂ ಸ್ವಯಂಪ್ರೇರಿತನಾಗಿ ತನ್ನ ಸಮಾಜವನ್ನು ಶುಚಿಯಾಗಿಟ್ಟುಕೊಂಡರೆ ಆಗ ಯಾವುದೋ ಸಂಘ ಸಂಸ್ಥೆಗಳು ಸ್ವಚ್ಛಭಾರತ ಅಭಿಯಾನ ಮಾಡುವ ಅಗತ್ಯವೇ ಇಲ್ಲ.
 *ಸ್ವಚ್ಚ ಭಾರತ ರಾಜಕೀಯ ಬೇಡ: -*
ಇನ್ನು ಕೆಲವರು ಸ್ವಚ್ಛ ಭಾರತ ಅಭಿಯಾನವೆನ್ನುವುದು ಮೋದಿ ಸರ್ಕಾರ ಈಗಾಗಲೇ ಶೋಷಣೆಗೊಳಗಾಗಿರುವ ಕಾರ್ಮಿಕ ವರ್ಗದವರನ್ನು ಮತ್ತಷ್ಟು ಶೋಷಿಸಲು ಹುಡುಕಿಕೊಂಡ ಮತ್ತೊಂದು ಮಾರ್ಗ ಎನ್ನುತ್ತಿದ್ದಾರೆ.ಇದು ಅವರ ಸಂಕುಚಿತ ಮನೋಭಾವವನ್ನು ಸೂಚಿಸುತ್ತದಷ್ಟೇ.ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕಾರ್ಮಿಕನಿಂದ ಹಿಡಿದು ಧನಿಕನವರೆಗೂ ಎಲ್ಲರ ಆದ್ಯ ಕರ್ತವ್ಯ.ಸ್ವಚ್ಛ ಭಾರತದಲ್ಲೂ ರಾಜಕೀಯ ಮಾಡದಿದ್ದರೆ ಒಳ್ಳೆಯದು.ಪ್ರಜೆಗಳಾದ ನಾವು ಸ್ವಚ್ಛ ಭಾರತ ಅಭಿಯಾನವನ್ನು ಕೆಲವೇ ಕೆಲವು ತಿಂಗಳುಗಳಿಗೆ ಸೀಮಿತಗೊಳಿಸಿ ಪ್ರಧಾನಿಯವರ ಮಾತನ್ನು ಮರೆಯದಿರೋಣ.ಪ್ರತಿಯೊಬ್ಬರೂ ನಮ್ಮ ಸುತ್ತಮುತ್ತಲಿನ ಸಮಾಜವನ್ನು ಸಾಧ್ಯವಾದಷ್ಟು ಶುಚಿಯಾಗಿರಿಸಿ ಭಾರತವನ್ನು ಸ್ವಚ್ಛಭಾರತವನ್ನಾಗಿಸಿ ಗಾಂಧೀಜಿಯವರ ಕನಸನ್ನು ಆದಷ್ಟು ಬೇಗ ನನಸು ಮಾಡೋಣ. ಬನ್ನಿ ಬದಲಾಗೋಣ ನವ ಭಾರತ ಕಟ್ಟುವ ಸಂಕಲ್ಪ ಮಾಡೋಣ.
✍️ *ರಾಘವೇಂದ್ರ ಪ್ರಭು,ಕವಾ೯ಲು* 
ಯುವ ಲೇಖಕ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter