ಮಂಗಳೂರು: ಗುರುಪುರ ಮೂಳೂರು ಸೈಟ್ ಎಂಬಲ್ಲಿ ಇತ್ತೀಚೆಗೆ ಗುಡ್ಡ ಕುಸಿತದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಬೊಂಡಂತಿಲ ಗ್ರಾಮದ ಗೋಮಾಳ ಜಾಗದಲ್ಲಿ ಮನೆ ನಿರ್ಮಿಸುವ ಜಿಲ್ಲಾಡಳಿತದ ಪ್ರಸ್ತಾವನೆಗೆ ಬೊಂಡಂತಿಲ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬೊಂಡಂತಿಲ ಗ್ರಾಮಕ್ಕೆ ಸೇರಿದ ಗೋಮಾಳ ಹಾಗೂ ಸರಕಾರಿ ಜಾಗವನ್ನು ಅನ್ಯ ಗ್ರಾಮದವರಿಗೆ ನೀಡಲು ವಿರೋಧ ವ್ಯಕ್ತಪಡಿಸಿರುವ ಗ್ರಾಮಸ್ಥರು ಈ ಸಂಬಂಧ ಜಿಲ್ಲಾಕಾರಿ, ಸಂಸದರು, ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ನೀರುಮಾರ್ಗ ಗ್ರಾಪಂ ಉಪಾಧ್ಯಕ್ಷ ಕಿಶೋರ್ ಕುಮಾರ್ ಉಗ್ಗಕೋಡಿ ಅವರ ನೇತೃತ್ವದಲ್ಲಿ ಬೊಂಡಂತಿಲ ಗ್ರಾಮದ ಒಟ್ಟು ೯೦೦ ಮಂದಿ ನಾಗರಿಕರ ಸಹಿ ಇರುವ ಮನವಿಯನ್ನು ಉಪತಹಸೀಲ್ದಾರ್ ಮೂಲಕ ನೀಡಲಾಯಿತು.
*ಗ್ರಾಮಸ್ಥರಿಗೆ ನೀಡಲಿ:
ಬೊಂಡಂತಿಲ ಗ್ರಾಮದ ಗೋಮಾಳದಲ್ಲಿ ಹಾಗೂ ಕುಮ್ಕಿ ಜಾಗದಲ್ಲಿ ಮನೆಗಳನ್ನು ನೀಡಲು ಜಿಲ್ಲಾಡಳಿತ ಹೊರಟಿದೆ. ನಮ್ಮ ಗ್ರಾಮ ಪಂಚಾಯತ್ನಲ್ಲಿ ಸುಮಾರು ೧೦೦೦ಕ್ಕಿಂತ ಹೆಚ್ಚು ನಿರಾಶ್ರಿತರಿದ್ದು, ಸುಮಾರು ೨೦ ವರ್ಷದಿಂದ ಯಾವುದೇ ಮನೆ ನಿವೇಶನವನ್ನು ನೀಡಿಲ್ಲ. ಮನೆ ನಿವೇಶನ ನೀಡುವುದಾದರೆ ನಮ್ಮ ಗ್ರಾಮದವರಿಗೆ ಮೊದಲ ಆದ್ಯತೆ ನೀಡಬೇಕು. ನಮ್ಮ ಗ್ರಾಮದಲ್ಲಿ ಯಾವುದೇ ಸ್ಮಶಾನ ಇಲ್ಲದಿರುವುದರಿಂದ, ಶ್ಮಶಾನಕ್ಕೆ ಬೇಕಾದ ಜಾಗವನ್ನು ಕಾಯ್ದಿರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೊಂಡಂತಿಲ ಗ್ರಾಮದ ಅಂಚೆ ಕಚೇರಿ, ಆರೋಗ್ಯ ಕೇಂದ್ರ, ಸರಕಾರಿ ಸಂಸ್ಥೆ, ಆಟದ ಮೈದಾನಕ್ಕೆ ಜಾಗ ನೀಡಬೇಕು, ಗೋಶಾಲೆ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಗೋಕುಲ್ದಾಸ್ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸಚಿನ್ ಹೆಗ್ಡೆ, ಸ್ಥಳೀಯರಾದ ಯಶ್ವಿನ್ ಎನ್. ಕುಂದರ್, ಗೋಪಾಲ್ ಕೊನಿಮಾರ್, ಸತೀಶ್ ಉಗ್ಗಕೊಡಿ, ಸಂಜೀವ ಮಜಲ್ ಉಪಸ್ಥಿತರಿದ್ದರು.
ಬೊಂಡಂತಿಲ ಗ್ರಾಮದಲ್ಲಿ ೨೦ ಎಕರೆ ಗೋಮಾಳ ಜಾಗವನ್ನು ಗುರುಪುರ ಗುಡ್ಡ ಕುಸಿತ ಸಂತ್ರಸ್ತರಿಗೆ ಮನೆ ನಿರ್ಮಿಸಲು ಜಿಲ್ಲಾಡಳಿತ ಹೊರಟಿದೆ. ಬೊಂಡಂತಿಲ ಗ್ರಾಮದಲ್ಲಿ ೧ ಸಾವಿರ ಮಂದಿ ನಿವೇಶನ ರಹಿತರು ಮನೆ ನಿರ್ಮಾಣಕ್ಕೆ ಜಾಗ ನೀಡುವಂತೆ ಅರ್ಜಿ ನೀಡಿ ಕಳೆದ ೨೦ ವರ್ಷಗಳಿಂದ ಕಾಯುತ್ತಿದ್ದಾರೆ. ಗುರುಪುರ ನಿವಾಸಿಗಳಿಗೆ ಬೊಂಂಡಂತಿಲದಲ್ಲಿ ಜಾಗ ನೀಡುವ ಮುನ್ನ ನಮ್ಮ ಗ್ರಾಮದ ನಿವೇಶನ ರಹಿತರಿಗೆ ಮನೆ ನಿರ್ಮಿಸಿಕೊಡಲಿ. ಈ ಹಿಂದೆ ಇದೇ ಗೋಮಾಳ ಜಾಗವನ್ನು ಸರಕಾರಿ ಐಟಿಐ, ಕ್ರೀಡಾಂಗಣ, ಗೋಶಾಲೆ ನಿರ್ಮಿಸಲು ಕೇಳಿದಾಗ ತಾಂತ್ರಿಕ ಸಮಸ್ಯೆ ನೆಪ ಒಡ್ಡಿ ಜಾಗ ನೀಡಲು ನಿರಾಕರಿಸಲಾಗಿತ್ತು. ಈಗ ಏಕಾಏಕಿ ಬೇರೆ ಗ್ರಾಮದವರಿಗೆ ಮನೆ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ನಮ್ಮ ಗ್ರಾಮದ ಜಾಗವನ್ನು ಗ್ರಾಮದೊಳಗಿನ ನಿರ್ವಸಿತರಿಗೆ ಮೊದಲು ಹಂಚಿಕೆ ಮಾಡಲಿ.
-ಗೋಕುಲ್ದಾಸ್ ಶೆಟ್ಟಿ
ಮಂಗಳೂರು ತಾಪಂ ಮಾಜಿ ಅಧ್ಯಕ್ಷ, ಸ್ಥಳೀಯರು.
