ಗುರುಪುರ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದರೂ, ಆಧುನಿಕ ಯಂತ್ರೋಪಕರಣ ಪದ್ಧತಿಯ ಕೃಷಿ ಆಸಕ್ತರ ಸಂಖ್ಯೆ ಹೆಚ್ಚುತ್ತಿದೆ. ಕೃಷಿ ಆಸಕ್ತ ಯುವಜನರ ಗುಂಪು, ಸಂಘ-ಸಂಸ್ಥೆಗಳು ಎಕ್ರೆಗಟ್ಟಲೆ ಹಡೀಲು ಗದ್ದೆ ಲೀಸ್‍ಗೆ ಪಡೆದು ಕೃಷಿ ಮಾಡುತ್ತಿವೆ. ಇಂತಹ ಆಸಕ್ತರಿಗೆ ಪೂರಕವೆಂಬಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಕೆಲಸ ಮಾಡುತ್ತಿದೆ. ಗುರುಪುರ ಹೋಬಳಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಸರ್ಕಾರದ ಸಹಕಾರದೊಂದಿಗೆ ಆಧುನಿಕ ಭತ್ತದ ಕೃಷಿಗೆ ಯಂತ್ರನಾಟಿಯ ಸಸಿ `ಮಡಿ’ ತಯಾರಿಸಿ ಆಸಕ್ತರನ್ನು ಭತ್ತದ ಕೃಷಿಗೆ ಪ್ರೇರೇಪಿಸುತ್ತಿದೆ. ಸಂಸ್ಥೆಯು ಹಲವು ವರ್ಷದಿಂದ ಕಾರ್ಯಪ್ರವೃತ್ತವಾಗಿದ್ದರೂ ಕಳೆದ ಮೂರ್ನಾಲ್ಕು ವರ್ಷದಿಂದ ರೈತರಿಗೆ ಬಾಡಿಗೆ ಉಳುಮೆ ಮತ್ತು ನಾಟಿ ಯಂತ್ರ ಒದಗಿಸಿ, ರೈತರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಕೃಷಿ ಕೂಲಿಯಾಳುಗಳ ಕೊರತೆ ಕಂಡು ಬಂದಿರುವ ಇಂದಿನ ದಿನಗಳಲ್ಲಿ ಯಂತ್ರೋಪಕರಣ ಮೂಲಕ ಕೃಷಿಗೆ ಹೆಚ್ಚಿನವರು ಒಲವು ತೋರಿಸುತ್ತಿದ್ದಾರೆ.

gur-june-18-bhoja bangera-1

ಸಂಸ್ಥೆಯಿಂದ ಭತ್ತದ ಕೃಷಿ  ಉಚಿತ ಮಾಹಿತಿ-ತರಬೇತಿ 

ಈ ಬಾರಿ ಯಂತ್ರನಾಟಿಯ ಸಸಿ ಮಡಿ ತಯಾರಿಗೆ ಸಂಸ್ಥೆ ಉಚಿತ ಮಾಹಿತಿ ಮತ್ತು ತರಬೇತಿ ನೀಡುತ್ತಿದೆ. ಮಂಗಳೂರು ತಾಲೂಕಿನ ಬಜ್ಪೆ ಆದ್ಯಪಾಡಿಯ ಭೋಜ ಬಂಗೇರ ಎಂಬವರು ಎರಡು ಎಕ್ರೆ ಜಾಗದಲ್ಲಿ ಭತ್ತದ ಸಸಿ ಮಡಿ ಮಾಡಿ ಬೇಸಾಯ ಮಾಡಲು ಸಿದ್ಧತೆ ನಡೆಸಿದ್ದಾರೆ. ಇದೇ ರೀತಿ ಉಳ್ಳಾಲ, ಗುರುಪುರ, ಗಂಜಿಮಠ ಸಹಿತ ಇನ್ನೂ ಹಲವೆಡೆ ಈ ಮಾದರಿಯ ಭತ್ತದ ಬೇಸಾಯಕ್ಕೆ ರೈತರ ಒಲವು ವ್ಯಕ್ತಪಡಿಸಿದ್ದಾರೆ.

gur-june-18-ulume-naati yantra-1

`ಯಂತ್ರ ಶ್ರೀ’ ಯೋಜನೆ :  ಈ ವರ್ಷ ಸಂಸ್ಥೆಯು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ `ಯಂತ್ರ ಶ್ರೀ’ ಯೋಜನೆ ಆರಂಭಿಸಿದೆ. ಒಂದು ಎಕ್ರೆ ಗದ್ದೆಯಲ್ಲಿ ಭತ್ತದ ಕೃಷಿ ಮಾಡಬೇಕಾದರೆ 80 ಟ್ರೇಗಳಲ್ಲಿ ಭತ್ತದ ಸಸಿ ತಯಾರಿಸಬೇಕು. ಸಣ್ಣಸಣ್ಣ ಪ್ಲಾಸ್ಟಿಕ್ ಟ್ರೇಗಳಲ್ಲಿ ಹದಗೊಳಿಸಲಾದ ಕಲ್ಲುರಹಿತ ಮಣ್ಣು ಹಾಸಿ, ಅದರರಲ್ಲಿ ಭತ್ತದ ಬೀಜ ಹಾಕಬೇಕು. ಮಳೆ ನೀರು ನೇರವಾಗಿ ಬೀಳದಂತೆ ಟ್ರೇಗಳ ಮೇಲ್ಗಡೆ ತೆಳುವಾಗಿ ಹುಲ್ಲು ಹಾಸಬೇಕು. ಇದು 22ರಿಂದ 23 ದಿನದಲ್ಲಿ ನಾಟಿಗೆ ಸಿದ್ಧವಾಗುತ್ತದೆ. ಚಾಪೆ ಮಾದರಿಯ ಈ ಭತ್ತದ ಸಸಿ ಮಡಿಯನ್ನು ಯಂತ್ರದ ಮೂಲಕ ನಾಟಿ ಮಾಡಲು ಚಾಪೆಯಂತೆ ಮಡಚಲಾಗುತ್ತದೆ. ಯಂತ್ರವು ಸುಮಾರು ಆರಿಂಚು ಅಂತರದಲ್ಲಿ ನಾಟಿ ಮಾಡುತ್ತದೆ. ಹಳೆಯ ಭತ್ತದ ಸಸಿ ಕೀಳುವ ಪದ್ಧತಿಯಲ್ಲಿ ಸಸಿಗಳ ಪುಲ್ಲೆ(ಕಿರು ಸಸಿ) ತುಂಡಾಗಿ ಸಾಯುತ್ತವೆ. ಆದರೆ ಈ ಮಾದರಿಯಲ್ಲಿ ಒಂದೊಂದು ಸಸಿಯಲ್ಲಿ ಕನಿಷ್ಠ ಹತ್ತಿಪ್ಪತ್ತು `ಪುಲ್ಲೆ ಸಸಿ’ ಉಳಿದುಕೊಳ್ಳುತ್ತದೆ ಮತ್ತು ಅಂತರದ ನಾಟಿಯಲ್ಲಿ ಅವು ಹುಲುಸಾಗಿ ಬೆಳೆಯುತ್ತವೆ. ನಾಟಿಗೆ ಮುಂಚೆ ಯಂತ್ರದ ಮೂಲಕ ಸಂಸ್ಥೆಯೇ ಗದ್ದೆ ಉಳುಮೆ ಮಾಡಿ ಕೊಡುತ್ತದೆ.

gur-june-18-sasi madi tray

“ಚಾಪೆ ಮಾದರಿ ಭತ್ತದ ಕೃಷಿಯಿಂದ ರೈತರಿಗೆ ಲಾಭ ಹೆಚ್ಚಿದ್ದು, ಸಮಯ ಉಳಿತಾಯವಾಗುತ್ತದೆ. ಕೂಲಿಯಾಳುಗಳ ಕೊರತೆ ಇರುವುದಿಲ್ಲ. ಯಂತ್ರ ಬಳಕೆಯಿಂದ ನಿರ್ದಿಷ್ಟ ಅವಧಿಯಲ್ಲಿ ಕೃಷಿ ಮುಗಿಸಲು ಸಾಧ್ಯವಿದೆ. ಯುವಜನರು ಇಂತಹ ಕೃಷಿಗೆ ಆದ್ಯತೆ ನೀಡಿದರೆ, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಆಗಲಿದೆ. ಹಡೀಲು ಗದ್ದೆ ಪ್ರದೇಶಗಳು ಹಸಿರಾಗಲಿವೆ” ಎಂದು ಸದ್ಯ ಎಡಪದವಿನಿಂದ ಜೂ. 17ರಂದು ಗುರುಪುರ ಕೈಕಂಬದ ತೋಟಗಾರಿಕೆ ಇಲಾಖೆ ಕಚೇರಿ ಆವರಣಕ್ಕೆ ಸ್ಥಳಾಂತರಗೊಂಡಿರುವ ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಸಂಸ್ಥೆಯಲ್ಲಿ ಸಿಎಚ್‍ಎಸ್‍ಸಿ ಪ್ರಬಂಧಕ ರಾಘವೇಂದ್ರ ಪಿ ಹೇಳುತ್ತಾರೆ.

By Suddi9

Leave a Reply

Your email address will not be published. Required fields are marked *