ಬಂಟ್ವಾಳ: ನಗರ ಸ್ಥಳೀಯಾಡಳಿತ ಸಂಸ್ಥೆಗೆ ಚುನಾವಣೆ ನಡೆದ ಸರಿ ಸುಮಾರು ಒಂದೂವರೆ ವರ್ಷದ ಬಳಿಕ ಪುರಸಭೆ,ನಗರಸಭೆಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರಕಾರ ಬುಧವಾರ ಪ್ರಕಟಿಸಿದ್ದು, ಪ್ರತಿಷ್ಠಿತ ಬಂಟ್ವಾಳ ಪುರಸಭೆಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದವರ್ಗ ಬಿ ಮಹಿಳೆಗೆ ಮೀಸಲಿಡಲಾಗಿದೆ. ಅದರಂತೆ ಬಂಟ್ವಾಳ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಎರಡು ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.
೨೦೧೮ ರ ಆಗಸ್ಟ್ 27 ರಂದು ಪುರಸಭೆಗೆ ಚುನಾವಣೆ ನಡೆದಿತ್ತು.ಸೆ.3 ರಂದು ಫಲಿತಾಂಶ ಬಂದಿದ್ದು, 27 ಸ್ಥಾನಗಳ ಪೈಕಿ ಬಿಜೆಪಿ 11 ,ಕಾಂಗ್ರೆಸ್ 12, ಎಸ್ ಡಿಪಿಐ 4 ಸ್ಥಾನ ಗಳಿಸಿತ್ತು. ಫಲಿತಾಂಶದಂದೆ ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆಗೂ ಮೀಸಲಾತಿ ಪ್ರಕಟವಾಗಿತ್ತು,ಆದರೆ ಆಗಿನ ಮೈತ್ರಿಸರಕಾರ ಬಂಟ್ವಾಳ ಪುರಸಭೆ ಸೇರಿದಂತೆ ರಾಜ್ಯದ ಕೆಲ ನಗರಸ್ಥಳೀಯಾಡಳಿತ ಸಮನಸ್ಥೆಗೆ ಪ್ರಕಟವಾದ ಮೀಸಲಾತಿಯನ್ನು ಬದಲಾಯಿಸಿದ ಹಿನ್ನಲೆಯಲ್ಲಿ ಬಂಟ್ವಾಳ ಪುರಸಭೆಯ ಸದಸ್ಯರ ಸಹಿತ ರಾಜ್ಯದ ಕೆಲ ಸ್ಥಳೀಯಾಡಳಿತ ಸಂಸ್ಥೆಯ ಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಚರ ಆಯ್ಕೆ ನೆನೆಗುದಿಗೆ ಬಿದ್ದಿತ್ತು.ಇದೀಗ ಸುಮಾರು ಒಂದೂವರೆ ವರ್ಷದ ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟವಾಗಿದೆ.
