ಅರ್ಹರಿಗೆ ಸಹಾಯಹಸ್ತ ನೀಡುವುದು ನಮ್ಮೆಲ್ಲರ ಆದ್ಯಕರ್ತವ್ಯ
ಮೂಲ್ಕಿ:ಜನಪರ ಕಾಳಜಿಯಿಂದ ಅರ್ಹರಿಗೆ ಸಹಾಯಹಸ್ತ ಚಾಚುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಿನಾಥ ಪಡಂಗ ಹೇಳಿದರು.
ಮೂಲ್ಕಿ ಗೇರುಕಟ್ಟೆಯ ಒಂಭತ್ತು ಮಾಗಣೆಯ ಮುಂಡಾಲ ಶಿವ ಸಮಾಜ ಸೇವಾ ಸಂಘದಲ್ಲಿ ಸಹಾಯಧನ ವಿತರಣಾ ಸಮಾರಂಭದಲ್ಲಿ ಮಾತನಾಡಿ ಮೂಲ್ಕಿ ಪರಿಸರದಲ್ಲಿ ಜಾತಿ ಮತ ಬೇಧ ಮರೆತು ನಿರಂತರ ಎಲೆ ಮರೆಯಲ್ಲಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮುಂಡಾಲ ಸಮಾಜದ ಕಾರ್ಯವೈಖರಿ ಎಲ್ಲರಿಗೂ ಮಾದರಿಯಾಗಿದೆ ಎಂದವರು ಹೇಳಿದರು.
ಈ ಸಂದರ್ಭ ಚಾಲಕ ವೃತ್ತಿಯಲ್ಲಿದ್ದು ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕೆಎಸ್ ರಾವ್ ನಗರದ ಶಾಂತಾರಾಮ್ ಕಾಂಚನ್ ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ಅವರ ಮನೆಯವರಿಗೆ ಮುಂಡಾಲ ಶಿವ ಸಮಾಜ ಸೇವಾ ಸಂಘದ ವತಿಯಿಂದ ರೂಪಾಯಿ ಐವತ್ತು ಸಾವಿರ ಸಹಾಯ ಧನ ವಿತರಿಸಲಾಯಿತು.
ಸಂಘದ ಅಧ್ಯಕ್ಷ ಯಶವಂತ್ ಐಕಳ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಗೇರುಕಟ್ಟೆ ಶಿವ ಭಜನಾ ಮಂದಿರದ ಮೊಕ್ತೇಸರ ಹಾಗೂ ಅರ್ಚಕ ವಿಶ್ವನಾಥ್, ಮೂಲ್ಕಿ ಪೋಲಿಸ್ ಎಎಸ್‍ಐ ಚಂದ್ರಶೇಖರ್, ಸಂಘದ ಗೌರವಾಧ್ಯಕ್ಷ ಶ್ರೀಧರ್ ಪಕ್ಷಿಕೆರೆ, ಕಾರ್ಯದರ್ಶಿ ಸುಕುಮಾರ್ ಬಿ. ಮುಖ್ಯ ಅತಿಥಿಗಳಾಗಿ ಭಗವಹಿಸಿದ್ದರು.
ಇದೇ ಸಂದರ್ಭ ಶಾಂತಾರಾಮ್ ಕಾಂಚನ್ ನಿಧನಕ್ಕೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.ಸಂಘದ ಕಾರ್ಯದರ್ಶಿ ಸುಕುಮಾರ್ ಸ್ವಾಗತಿಸಿ ವಂದಿಸಿದರು.