ಭಿಕ್ಷೆ ಬೇಡಿ ಮೂಲ್ಕಿ ಬಪ್ಪನಾಡು ದೇಗುಲಕ್ಕೆ 1 ಲಕ್ಷ ನೀಡಿದ ವೃದ್ಧೆ
ಮೂಲ್ಕಿ: ಆರ್ಥಿಕ ಸ್ಥಿತಿವಂತರಷ್ಟೇ ದಾನಾಸಕ್ತರಾಗಿರಬೇಕೆಂದಿಲ್ಲ. ಇಲ್ಲೊಬ್ಬರು 80ರ ಹರೆಯದ ಭಿಕ್ಷುಕಿ ಹಗಲಿಡೀ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲ ಅನ್ನದಾನಕ್ಕೆ 1 ಲಕ್ಷ ದೇಣಿಗೆ ನೀಡಿದ್ದಾರೆ. ವಿಶೇಷವೆಂದರೆ ಈವರೆಗೆ ಈ ವೃದ್ಧೆ ಈ ರೀತಿ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಲ್ಲಿ ಹಲವು ದೇಗುಲಗಳಿಗೆ 59 ಲಕ್ಷ ದೇಣಿಗೆ ನೀಡಿ ಮಾದರಿಯೆನಿಸಿದ್ದಾರೆ. ಕುಂದಾಪುರ ತಾ. ಸಾಲಿಗ್ರಾಮದಲ್ಲಿ ತನ್ನ ಗಂಡ, ಮಕ್ಕಳೊಂದಿಗೆ ಸಂಸಾರ ಸಾಗಿಸುತ್ತಿದ್ದ ಅಶ್ವತ್ಥಮ್ಮ, ಅನಿರೀಕ್ಷಿತವಾಗಿ ಗಂಡ, ಮಕ್ಕಳು ಅಸುನೀಗಿದ ಬಳಿಕ ಜೀವನದಲ್ಲಿ ಜಿಗುಪ್ಪೆ ಹೊಂದಿ ಮನೆ ತೊರೆದರು.

ತನ್ನವರಿಲ್ಲದೆ ಕೊರಗು ಮರೆಯಲು, ತನ್ನಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸಂಕಲ್ಪ ದೊಂದಿಗೆ ಗಟ್ಟಿ ನಿರ್ಧಾರ ಮಾಡಿ ಭಿಕ್ಷೆ ಬೇಡಲು ಆರಂಭಿಸಿದರು. ಹಗಲಿಡೀ ಭಿಕ್ಷೆ ಬೇಡಿ ಅದರಿಂದ ಸಂಗ್ರಹವಾಗುವ ಹಣವನ್ನು ಪ್ರತಿದಿನ ಪಿಗ್ಗಿಗೆ ಹಾಕಲು ಆರಂಭಿಸಿದರು. ಹಾಗೆ ಸಂಗ್ರಹವಾದ ಮೊತ್ತ ಲಕ್ಷ ರು. ತಲುಪುತ್ತಿದ್ದಂತೆ ದೇಗುಲಕ್ಕೆ ದಾನ ಮಾಡುತ್ತಾರೆ. ಸೋಮವಾರ ಬಪ್ಪನಾಡಿಗೆ ದೇಣಿಗೆ ನೀಡಿದ್ದು, ಅರ್ಚಕ ನರಸಿಂಹ ಭಟ್ ಹರಸಿದರು.